ನವದೆಹಲಿ: ಭಾರತ ಮೂಲದ ಆನ್‌ಲೈನ್ ಹಣ ವರ್ಗಾವಣೆ ಅಪ್ಲಿಕೇಷನ್ ಫೋನ್ ಪೇ ಬಳಕೆದಾರರ ನೋಂದಣಿ 60 ಕೋಟಿ ದಾಟಿದೆ ಎಂದು ಕಂಪನಿ ಮಂಗಳವಾರ ಹೇಳಿದೆ.
ಸತತ 10 ವರ್ಷಗಳಿಂದ ಫೋನ್ ಪೇ ಕಾರ್ಯಾಚರಣೆ ನಡೆಸುತ್ತಿದ್ದು, ಕಂಪನಿಯು ಸಂಪತ್ತು ನಿರ್ವಹಣೆ, ಪಿನ್‌ಕೋಡ್ ಸಹಿತ ಇ–ಕಾಮರ್ಸ್ ವ್ಯವಸ್ಥೆ ಸೇರಿ ಹಲವು ರೀತಿಯ ಕಾರ್ಯಾಚರಣೆಯನ್ನು ಅಭಿವೃದ್ಧಿಗೊಳಿಸಿದೆ.
ಈ ಕುರಿತು ಮಾತನಾಡಿರುವ ಕಂಪನಿಯ ಸಿಇಒ ಸಮೀರ್ ನಿಗಮ್, ‘60 ಕೋಟಿ ಬಳಕೆದಾರರು ನೋಂದಣಿಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಆರ್ಥಿಕ ವ್ಯವಸ್ಥೆಯನ್ನು ಸುಲಭಗೊಳಿಸುವ ನಮ್ಮ ಗುರಿ ಇನ್ನಷ್ಟು ಹತ್ತಿರವಾಗಿದೆ. ಬಳಕೆದಾರರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲು, ಭಾರತದ ಡಿಜಿಟಲ್ ಪಾವತಿ ಬದಲಾವಣೆಗಾಗಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು’ ಎಂದಿದ್ದಾರೆ.
2016 ಆಗಸ್ಟ್‌ನಲ್ಲಿ ಫೋನ್‌ಪೇ ಆ್ಯಪ್ ಬಳಕೆಗೆ ಮುಕ್ತವಾಗಿತ್ತು. ಬೆಂಗಳೂರಿನಲ್ಲಿ ಕಂಪನಿಯ ಪ್ರಧಾನ ಕಚೇರಿಯಿದೆ. 2025ರ ಮಾರ್ಚ್ ವೇಳೆಗೆ ಆ್ಯಪ್‌ನಲ್ಲಿ ನೋಂದಣಿಯಾದವರ ಸಂಖ್ಯೆ 60 ಕೋಟಿ ದಾಟಿದ್ದು, ಡಿಜಿಟಲ್ ಹಣ ಪಾವತಿ ಸಂಪರ್ಕ ಜಾಲ 4 ಕೋಟಿ ವ್ಯಾಪಾರಿಗಳನ್ನು ತಲುಪಿದೆ. ಪ್ರತಿನಿತ್ಯ ಫೋನ್ ಪೇ ಮೂಲಕ ₹33 ಕೋಟಿಗೂ ಅಧಿಕ ಹಣ ಪಾವತಿಯಾಗುತ್ತಿದ್ದು, ವಾರ್ಷಿಕವಾಗಿ ಒಟ್ಟು ಪಾವತಿ ಮೌಲ್ಯ ₹150 ಕೋಟಿಗೂ ಅಧಿಕವಾಗಲಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.