ADVERTISEMENT

ಆರ್ಥಿಕತೆಗೆ ಬಲವಾದ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಗತ್ಯ: ಪ್ರಧಾನಿ ಮೋದಿ

ರಿಟೇಲ್ ಡೈರೆಕ್ಟ್‌ ಮತ್ತು ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಗೆ ಚಾಲನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2021, 7:19 IST
Last Updated 12 ನವೆಂಬರ್ 2021, 7:19 IST
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಆರ್ಥಿಕತೆಗೆ ಬಲವಾದ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇಂದ್ರ–ರಾಜ್ಯ ಸರ್ಕಾರಗಳ ಬಾಂಡ್‌ಗಳಲ್ಲಿ ಸಣ್ಣ ಹೂಡಿಕೆದಾರರಿಗೆ ನೇರವಾಗಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುವ ರಿಟೇಲ್ ಡೈರೆಕ್ಟ್‌ ಮತ್ತು ಗ್ರಾಹಕರ ದೂರುಗಳನ್ನು ಪರಿಹರಿಸುವ ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಗೆ ಆನ್‌ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಿಟೇಲ್ ಡೈರೆಕ್ಟ್‌ ಯೋಜನೆಯಿಂದ ದೇಶದ ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಬಾಂಡ್‌ ಮೇಲೆ ಹೂಡಿಕೆ ಮಾಡಲು ಸುರಕ್ಷಿತ ಮಾಧ್ಯಮ ದೊರೆತಂತಾಗಿದೆ. ಆರ್‌ಬಿಐಯ ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಂದು ರೂಪ ಕೊಡಲಿದೆ ಎಂದು ಮೋದಿ ಹೇಳಿದರು.

ADVERTISEMENT

ಇಂದು ಚಾಲನೆ ನೀಡಲಾಗಿರುವ ಆರ್‌ಬಿಐ ರಿಟೇಲ್‌ ಡೈರೆಕ್ಟ್‌ ಹಾಗೂ ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸಲಿವೆ. ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭಗೊಳಿಸಲಿವೆಯಲ್ಲದೆ, ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತ ಮಾಧ್ಯಮವಾಗಿರಲಿವೆ ಎಂದು ಅವರು ಹೇಳಿದರು.

ಕಳೆದ 7 ವರ್ಷಗಳಲ್ಲಿ ಎನ್‌ಪಿಎಯನ್ನು (ಬ್ಯಾಂಕ್‌ಗಳ ವಸೂಲಾಗದ ಸಾಲ) ಪಾರದರ್ಶಕಗೊಳಿಸಲಾಗಿದೆ. ಕೈಗೊಳ್ಳಬೇಕಾದ ನಿರ್ಣಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಹಾಗೂ ಹಣಕಾಸು ವ್ಯವಸ್ಥೆಯ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೋದಿ ಹೇಳಿದರು.

ಆರ್‌ಬಿಐ ರಿಟೇಲ್‌ ಡೈರೆಕ್ಟ್‌ ಯೋಜನೆಯು ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಬಾಂಡ್‌ ಮಾರುಕಟ್ಟೆಯು ಸುಲಭದಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಪ್ರಧಾನಿ ಕಚೇರಿಯು (ಪಿಎಂಒ) ಗುರುವಾರ ತಿಳಿಸಿತ್ತು. ಯೋಜನೆಯ ಮೂಲಕ ಸಣ್ಣ ಹೂಡಿಕೆದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸುವ ಟ್ರೆಷರಿ ಬಾಂಡ್‌, ಟ್ರೆಷರಿ ಬಿಲ್‌ ಹಾಗೂ ಸಾಲಪತ್ರಗಳಲ್ಲಿ ನೇರವಾಗಿ ಹೂಡಿಕೆ ಮಾಡಬಹುದು. ಸಣ್ಣ ಹೂಡಿಕೆದಾರರು ಆರ್‌ಬಿಐ ಮೂಲಕ ತಮ್ಮ ಸರ್ಕಾರಿ ಸಾಲಪತ್ರ ಖಾತೆಯನ್ನು ಆನ್‌ಲೈನ್‌ ಮೂಲಕ ತೆರೆದು, ಉಚಿತವಾಗಿ ಖಾತೆಯ ನಿರ್ವಹಣೆ ಮಾಡಬಹುದಾಗಿದೆ.

ಏಕೀಕೃತ ಒಂಬುಡ್ಸ್‌ಮನ್‌ ಯೋಜನೆಯು ಗ್ರಾಹಕರ ದೂರುಗಳನ್ನು ಪರಿಹರಿಸುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶ ಹೊಂದಿದೆ. ಗ್ರಾಹಕರು ತಮ್ಮ ದೂರುಗಳನ್ನು ಹೇಳಿಕೊಳ್ಳಲು ಹತ್ತಾರು ಕಡೆ ತಿರುಗಬೇಕಿಲ್ಲ. ದೂರುಗಳನ್ನು ಹೇಳಿಕೊಳ್ಳಲು ಹಾಗೂ ಪರಿಹಾರ ಪಡೆಯಲು ಇರುವ ಮಾರ್ಗಗಳ ಬಗ್ಗೆ ಬಹುಭಾಷಾ ಸಹಾಯವಾಣಿಯು ಮಾಹಿತಿ ನೀಡಲಿದೆ ಎಂದು ಪಿಎಂಒ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.