ADVERTISEMENT

ತೆರಿಗೆ ಪಾವತಿದಾರರ ಸನ್ನದು ಜಾರಿ: ನರೇಂದ್ರ ಮೋದಿ

ಪಿಟಿಐ
Published 13 ಆಗಸ್ಟ್ 2020, 20:33 IST
Last Updated 13 ಆಗಸ್ಟ್ 2020, 20:33 IST
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   
""

ನವದೆಹಲಿ: ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಎಡೆಯಿಲ್ಲದಂತೆ ಮಾಡುವ, ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ವರ್ತಿಸದಂತೆ ಮಾಡುವ ಉದ್ದೇಶದ, ಇಂಟರ್ನೆಟ್‌ ಮೂಲಕ ನಡೆಯುವ ತೆರಿಗೆ ಪರಿಶೀಲನೆ ಹಾಗೂ ತೆರಿಗೆ ಮೇಲ್ಮನವಿ ಸೌಲಭ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು.

ಆದಾಯ ತೆರಿಗೆ ವ್ಯವಸ್ಥೆಯು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಆಗಿರಬೇಕು ಎಂಬ ಉದ್ದೇಶದಿಂದ ತೆರಿಗೆ ಸನ್ನದನ್ನು ಜಾರಿಗೆ ತರಲಾಗುತ್ತಿದೆ ಎಂದೂ ಪ್ರಧಾನಿ ಪ್ರಕಟಿಸಿದರು.

‘ಪಾರದರ್ಶಕ ತೆರಿಗೆ ವ್ಯವಸ್ಥೆ – ಪ್ರಾಮಾಣಿಕರನ್ನು ಗೌರವಿಸುವ ವೇದಿಕೆ’ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ ಅವರು, ‘ಭಾರತದಲ್ಲಿ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ 1.5 ಕೋಟಿ ಮಾತ್ರ. ತೆರಿಗೆ ಬಾಕಿ ಉಳಿಸಿಕೊಂಡಿರುವವರು ಪ್ರಾಮಾಣಿಕವಾಗಿ ಅದನ್ನು ಪಾವತಿಸಿ, ರಾಷ್ಟ್ರನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದರು.

ADVERTISEMENT

ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಮೂಲಕ ನಡೆಯುವ ತೆರಿಗೆ ಪರಿಶೀಲನಾ ಪ್ರಕ್ರಿಯೆಯಲ್ಲಿ, ತೆರಿಗೆದಾರರು ಯಾವುದೇ ಕಚೇರಿಗೆ ಭೇಟಿ ನೀಡಬೇಕಿಲ್ಲ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯನ್ನು ಭೇಟಿಯಾಗಬೇಕಾಗಿಯೂ ಇಲ್ಲ. ತೆರಿಗೆ ಪಾವತಿ ವಿಚಾರಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನೂ ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಮೂಲಕ ಸಲ್ಲಿಸುವ ಅವಕಾಶ ಸೆಪ್ಟೆಂಬರ್ 25ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ಹೊಸ ವ್ಯವಸ್ಥೆಯ ಅಡಿ, ತೆರಿಗೆ ಇಲಾಖೆಯಿಂದ ಬರುವ ನೋಟಿಸ್‌ಗಳಿಗೆ ಇ–ಮೇಲ್‌ ಮೂಲಕವೇ ಉತ್ತರ ನೀಡಬಹುದು. ‘ತೆರಿಗೆ ಸನ್ನದಿನ ಮೂಲಕ ನ್ಯಾಯಸಮ್ಮತ, ಸೌಜನ್ಯದ ವ್ಯವಸ್ಥೆ ರೂಪುಗೊಳ್ಳುತ್ತದೆ. ತೆರಿಗೆ ಪಾವತಿ ಮಾಡುವವರನ್ನು ಪ್ರಾಮಾಣಿಕರು ಎಂದು ಪರಿಗಣಿಸಲಾಗುತ್ತದೆ’ ಎಂದರು.

‘ಹಿಂದೆ ಆದ ಆರ್ಥಿಕ ಸುಧಾರಣೆಗಳು ಒತ್ತಡಗಳಿಗೆ ಒಳಗಾಗಿ ಆಗಿದ್ದವು. ಅವುಗಳಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ನಮ್ಮ ಪಾಲಿಗೆ ಸುಧಾರಣೆಗಳು ಅಂದರೆ, ಸಮಗ್ರವಾದವು ಹಾಗೂ ಇನ್ನೊಂದು ಸುಧಾರಣೆಗೆ ದಾರಿಯಾಗುವಂಥವು’ ಎಂದು ಮೋದಿ ಹೇಳಿದರು.

ಆದಾಯ ತೆರಿಗೆ ಇಲಾಖೆಯಿಂದ ಕಾಲಮಿತಿಯಲ್ಲಿ ಸೇವೆಗಳನ್ನು ನೀಡುವಂತೆ ಮಾಡಲು, ನಾಗರಿಕರನ್ನು ಸಶಕ್ತರನ್ನಾಗಿಸಲು ‘ತೆರಿಗೆ ಪಾವತಿದಾರರ ಸನ್ನದು’ ರೂಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020–21ನೇ ಸಾಲಿನ ಬಜೆಟ್ ಮಂಡಿಸುವಾಗ ಭರವಸೆ ನೀಡಿದ್ದರು.

ಹೂಡಿಕೆದಾರರಿಗೆ ಒಳ್ಳೆಯ ಸಂದೇಶ
ನವದೆಹಲಿ: ತೆರಿಗೆ ಪಾವತಿದಾರರ ಸನ್ನದು ವ್ಯವಸ್ಥೆಯು ಭಾರತದಲ್ಲಿನ ನಿಯಮಗಳಲ್ಲಿ ಸ್ಥಿರತೆ ಇರುತ್ತದೆ ಎಂಬ ಸಂದೇಶವನ್ನು ಜಾಗತಿಕ ಹೂಡಿಕೆದಾರರಿಗೆ ರವಾನಿಸುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ನಡೆಯುವ ತೆರಿಗೆ ಪರಿಶೀಲನೆ ಹಾಗೂ ಮೇಲ್ಮನವಿ ಪ್ರಕ್ರಿಯೆಯು ತೆರಿಗೆ ಪಾವತಿದಾರರ ಜೊತೆ ನ್ಯಾಯಸಮ್ಮತ ರೀತಿಯಲ್ಲಿ ವ್ಯವಹರಿಸುತ್ತದೆ ಎಂದೂ ಅವರು ಹೇಳಿದ್ದಾರೆ.

‘ಇವು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಸರಿಯಾದ ಹೆಜ್ಜೆಗಳು. ಸರ್ಕಾರ ನೀಡಿದ್ದ ಭರವಸೆಗಳಿಗೆ ಅನುಗುಣವಾಗಿಯೇ ಇವೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ದಿವ್ಯಾ ಬವೇಜಾ ಹೇಳಿದ್ದಾರೆ.

‘ಸನ್ನದಿನ ಪರಿಣಾಮವಾಗಿ ಸರ್ಕಾರ ಹಾಗೂ ತೆರಿಗೆ ಪಾವತಿದಾರರ ನಡುವಿನ ವಿಶ್ವಾಸ ಹೆಚ್ಚುತ್ತದೆ. ತೆರಿಗೆ ವಿಚಾರದಲ್ಲಿ ಕಿರುಕುಳ ತಪ್ಪಿಸುತ್ತದೆ’ ಎಂದು ತಜ್ಞರು ಹೇಳಿದ್ದಾರೆ. ಸಾಂಸ್ಥಿಕ ಹೂಡಿಕೆದಾರರು ಭಾರತದ ಮೇಲೆ ಹೆಚ್ಚು ಆಸಕ್ತಿ ತಾಳುವಂತೆ ಮಾಡುತ್ತದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.