ADVERTISEMENT

ಭಾರತದ ವಿರುದ್ಧ ಅಮೆರಿಕ ಪ್ರತೀಕಾರ ಕ್ರಮ: ಆದ್ಯತಾ ವ್ಯಾಪಾರ ರದ್ದು, 5ರಿಂದ ಜಾರಿ

ಪಿಟಿಐ
Published 1 ಜೂನ್ 2019, 19:45 IST
Last Updated 1 ಜೂನ್ 2019, 19:45 IST
ಟ್ರಂಪ್‌
ಟ್ರಂಪ್‌   

ವಾಷಿಂಗ್ಟನ್‌: ವಿದೇಶ ವ್ಯಾಪಾರದಲ್ಲಿ ಭಾರತಕ್ಕೆ ನೀಡಲಾಗಿರುವ ಆದ್ಯತಾ ವ್ಯಾಪಾರ ಒಪ್ಪಂದದ ಅನುಕೂಲತೆಯನ್ನು ಜೂನ್‌ 5 ರಿಂದ ಜಾರಿಗೆ ಬರುವಂತೆಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರದ್ದು ಮಾಡಿದ್ದಾರೆ.

ಸಾಮಾನ್ಯ ಆದ್ಯತಾ ವ್ಯವಸ್ಥೆಯಲ್ಲಿ (ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರನ್ಸ್–ಜಿಎಸ್‌ಪಿ)ಅಮೆರಿಕವು ಭಾರತಕ್ಕೆ ₹ 39,200 ಕೋಟಿ ಮೌಲ್ಯದ ಸರಕುಗಳಿಗೆ ಆಮದು ಸುಂಕದ ವಿನಾಯ್ತಿ ನೀಡಿತ್ತು.

‘ತನ್ನ ಮಾರುಕಟ್ಟೆ ಪ್ರವೇಶಿಸಲು ಅಮೆರಿಕಕ್ಕೆ ಭಾರತವು ಸಮಾನ ಮತ್ತು ಸಮಂಜಸವಾದ ಅವಕಾಶ ನೀಡುತ್ತಿಲ್ಲ ಎನ್ನುವ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

ADVERTISEMENT

ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಯ ಹಾದಿಯಲ್ಲಿ ಇರುವ ಭಾರತದಂತಹ ದೇಶಗಳ ಉತ್ಪನ್ನಗಳಿಗೆ ನೆರವು ನೀಡಲು ಆಮದು ಸುಂಕ ವಿನಾಯ್ತಿ ನೀಡುತ್ತಿವೆ. ಬಡ ದೇಶಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ನೆರವಾಗುವುದು ಇದರ ಉದ್ದೇಶವಾಗಿದೆ. ಭಾರತವು ಇದರ ಬಹುದೊಡ್ಡ ಫಲಾನುಭವಿ ದೇಶವಾಗಿದೆ.

ಒಪ್ಪಂದದಿಂದ ಭಾರತವನ್ನು ಕೈಬಿಡುವುದಾಗಿ ಟ್ರಂಪ್‌ ಅವರು ಮಾರ್ಚ್‌ 4ರಂದು ಘೋಷಿಸಿದ್ದರು. 60 ದಿನಗಳ ನೋಟಿಸ್‌ ಅವಧಿ ಮೇ 3ಕ್ಕೆ ಕೊನೆಗೊಂಡಿತ್ತು.

ಅಮೆರಿಕದ ಆದ್ಯತಾ ಸುಂಕ ವ್ಯವಸ್ಥೆಯ ಪ್ರಯೋಜನಕ್ಕೆ ಅರ್ಹತೆ ಪಡೆದ ದೇಶಗಳ ವಾಹನ ಬಿಡಿಭಾಗ ಮತ್ತು ಜವಳಿ ಉತ್ಪನ್ನಗಳು ಸೇರಿದಂತೆ 2 ಸಾವಿರ ಉತ್ಪನ್ನಗಳಿಗೆ ಯಾವುದೇ ಸುಂಕ ವಿಧಿಸಲಾಗುತ್ತಿಲ್ಲ.

2017ರಲ್ಲಿ ಭಾರತದ ₹ 39,900 ಕೋಟಿ ಮೊತ್ತದ ಸರಕುಗಳ ರಫ್ತು ವಹಿವಾಟು, ಸುಂಕರಹಿತ ಸೌಲಭ್ಯದ ಪ್ರಯೋಜನ ಪಡೆದುಕೊಂಡಿತ್ತು.

ನಿರ್ಧಾರಕ್ಕೆ ಕಾರಣವೇನು: ಭಾರತದ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳಿಗೆ ಸಮಾನವಾದ ಅವಕಾಶಗಳನ್ನು ನೀಡಲಾಗುತ್ತಿಲ್ಲ ಎಂದು ಅಮೆರಿಕದ ವೈದ್ಯಕೀಯ ಸಾಧನ ಮತ್ತು ಹೈನು ಉದ್ಯಮಗಳು ದೂರು ನಿಡಿದ್ದವು. ಸ್ಟೆಂಟ್‌ಗಳಂತಹ ಉತ್ಪನ್ನಗಳ ಮೇಲೆ ಭಾರತವು ದರ ನೀತಿ ವಿಧಿಸುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಅಂಶವನ್ನು ಪರಿಗಣಿಸಿ ಅಮೆರಿಕ ಸರ್ಕಾರ ನಿರ್ಧಾರ ಕೈಗೊಂಡಿದೆ.

ಮೋದಿ ಪ್ರತಿಕ್ರಿಯಿಸಲಿ: ಅಮೆರಿಕದ ನಿರ್ಧಾರದಿಂದ ದೇಶದ ರಫ್ತು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಬಿಕ್ಕಟ್ಟಿನಿಂದ ಹೇಗೆ ಹೊರಬರುವುದು ಎನ್ನುವುದನ್ನು ವಿವರಿಸುವಂತೆ ದೇಶದ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೆಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ, ‘ಭಾರತವು ಎರಡು ಆಘಾತಕ್ಕೆ ಒಳಗಾಗಿದೆ.ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇವೆ. ಇದೀಗ ವಿಶೇಷ ವ್ಯಾಪಾರ ಸ್ಥಾನಮಾನವನ್ನೂ ಕಳೆದುಕೊಂಡಿದ್ದೇವೆ’ ಎಂದಿದ್ದಾರೆ.

ಒಪ್ಪಂದ ರದ್ದು ಮಾಡುವ ಬಗ್ಗೆ ಅಮೆರಿಕವು ಮಾರ್ಚ್‌ನಲ್ಲಿಯೇ ತಿಳಿಸಿತ್ತು. ಹೀಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿ
ಸಿದ್ದಾರೆ.

ನಿರ್ಧಾರ ದುರದೃಷ್ಟಕರ: ಭಾರತ
ಒಪ್ಪಂದ ರದ್ದು ನಿರ್ಧಾರವು ದುರದೃಷ್ಟಕರ ಎಂದು ಅಮೆರಿಕದ ಆಡಳಿತ ತಳೆದಿರುವ ನಿಲುವಿನ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.

ಅಭಿವೃದ್ಧಿ ಸಾಧಿಸಬೇಕಾಗಿರುವ ಅನಿವಾರ್ಯತೆ ಮತ್ತು ಭಾರತೀಯರ ಉತ್ತಮ ಜೀವನ ಮಟ್ಟದ ದೃಷ್ಟಿಯಿಂದಾಗಿಅಮೆರಿಕ ಜತೆಗಿನ ಆರ್ಥಿಕ ಒಪ್ಪಂದಗಳನ್ನುಬಲಪಡಿಸಿಕೊಳ್ಳುವ ಕೆಲಸಗಳು ಮುಂದುವರಿಯಲಿವೆ ಎಂದೂ ಹೇಳಿದೆ.

ಯಾವುದೇ ರೀತಿಯ ಸಂಬಂಧವಾಗಿರಲಿ, ಅದರಲ್ಲಿಯೂ ನಿರ್ದಿಷ್ಟವಾಗಿ ಆರ್ಥಿಕ ಒಪ್ಪಂದಗಳ ವಿಷಯದಲ್ಲಿ ಸದ್ಯ ನಡೆಯುತ್ತಿರುವ ಆದ್ಯತಾ ಒಪ್ಪಂದದ ಕುರಿತ ವಿವಾದಗಳನ್ನು ಕಾಲ ಕಾಲಕ್ಕೆ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ವಾಣಿಜ್ಯ ಸಚಿವಾಲಯವು ತಿಳಿಸಿದೆ.

ಅಭಿವೃದ್ದಿ ಹೊಂದಿರುವ ಅಮೆರಿಕದಂತಹ ದೇಶಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ನೀಡುತ್ತಿರುವ ಆದ್ಯತಾ ವ್ಯಾಪಾರದ ಅನುಕೂಲತೆಗಳು ಏಕಪಕ್ಷೀಯವಾಗಿವೆ ಎಂದು ಹೇಳಿದೆ.

ದ್ವಿಪಕ್ಷೀಯ ಚರ್ಚೆಯಲ್ಲಿ ಅಮೆರಿಕದ ಕೆಲವು ಮನವಿಗಳನ್ನುಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತು. ಆದರೆ, ದುರದೃಷ್ಟವಷಾತ್‌ ಅಮೆರಿಕವು ಅದಕ್ಕೆ ಒಪ್ಪಗೆ ನೀಡಲಿಲ್ಲ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.