ADVERTISEMENT

ಬಜೆಟ್‌ ಮುದ್ರಣ ಪ್ರಕ್ರಿಯೆಗೆ ಚಾಲನೆ

ಸಚಿವೆ ನಿರ್ಮಲಾ ಸೀತಾರಾಮನ್‌ ಸಮ್ಮುಖದಲ್ಲಿ ಹಲ್ವಾ ಸಮಾರಂಭ

ಪಿಟಿಐ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಲ್ವಾ ವಿತರಿಸಿದರು  –ಪಿಟಿಐ ಚಿತ್ರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಲ್ವಾ ವಿತರಿಸಿದರು  –ಪಿಟಿಐ ಚಿತ್ರ   

ನವದೆಹಲಿ: ‘ಹಲ್ವಾ ಸಮಾರಂಭ’ದ ಮೂಲಕಕೇಂದ್ರ ಸರ್ಕಾರದ 2019–20ನೇ ಸಾಲಿನಬಜೆಟ್‌ ದಾಖಲೆಗಳ ಮುದ್ರಣ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಲಾಯಿತು.

ಸಾಂಪ್ರದಾಯಿಕ ‘ಹಲ್ವಾಸಮಾರಂಭ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್ ಅವರು ಸಚಿವಾಲಯದ ಎಲ್ಲ ಸಿಬ್ಬಂದಿಗೆ ಸಿಹಿ ವಿತರಿಸಿದರು.

ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌, ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್ ಪಾಂಡೆ, ಡಿಐಪಿಎಎಂ ಕಾರ್ಯದರ್ಶಿ ಅತನು ಚಕ್ರವರ್ತಿ ಮತ್ತು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಹಾಗೂ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ADVERTISEMENT

ದೊಡ್ಡ ಕಡಾಯಿಯಲ್ಲಿ ಸಿಹಿ ತಿನಿಸು ತಯಾರಿಸಿ, ಹಂಚಲಾಗುತ್ತದೆ. ಹಲ್ವಾವಿತರಿಸಿದ ನಂತರ,ಬಜೆಟ್‌ ತಯಾರಿಕೆ ಮತ್ತು ಮುದ್ರಣ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಬಹುತೇಕ ಸಿಬ್ಬಂದಿಯುಬಜೆಟ್‌ ಮಂಡನೆಯಾಗುವವರೆಗೆ ಕಚೇರಿಯಲ್ಲಿಯೇ ಉಳಿಯಲಿದ್ದಾರೆ.

ಈ ಅವಧಿಯಲ್ಲಿ ಅವರು ತಮ್ಮ ಕುಟುಂಬದ ಸದಸ್ಯರನ್ನು ಯಾವುದೇ ಬಗೆಯಲ್ಲಿ (ಮೊಬೈಲ್‌, ಇ–ಮೇಲ್‌) ಸಂಪರ್ಕಿಸುವಂತಿಲ್ಲ. ಹಿರಿಯ ಅಧಿಕಾರಿಗಳಷ್ಟೆ ಮನೆಗೆ ತೆರಳುತ್ತಾರೆ.

ಆರ್ಥಿಕ ತಜ್ಞರು, ಪರಿಣತರೊಂದಿಗೆ ಪ್ರಧಾನಿ ಚರ್ಚೆ
ಬಜೆಟ್‌ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಆರ್ಥಿಕ ತಜ್ಞರು, ಉದ್ಯಮ ವಲಯದ ಪರಿಣತರೊಂದಿಗೆ ಶನಿವಾರ ಚರ್ಚೆ ನಡೆಸಿ, ಸಲಹೆಗಳನ್ನು ಪಡೆದರು.

ನೀತಿ ಆಯೋಗ ಏರ್ಪ‍ಡಿಸಿದ್ದ ‘ಎಕನಾಮಿಕ್‌ ಪಾಲಿಸಿ–ದಿ ರೋಡ್‌ ಅಹೆಡ್‌’ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ 40ಕ್ಕೂ ಅಧಿಕ ಆರ್ಥಿಕ ತಜ್ಞರು ಮತ್ತು ಪರಿಣತರು ಭಾಗವಹಿಸಿದ್ದರು.

ಅರ್ಥಿಕತೆ ಮತ್ತು ಉದ್ಯೋಗ, ಕೃಷಿ ಮತ್ತು ನೀರಿನ ಸಂಪನ್ಮೂಲಗಳು, ರಫ್ತು, ಶಿಕ್ಷಣ ಮತ್ತು ಆರೋಗ್ಯ ವಿಷಯಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಮೋದಿ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌, ರಾಜ್ಯ ಸಚಿವ ರಾವ್‌ ಇಂದ್ರಜಿತ್‌ ಸಿಂಗ್‌,ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.