ADVERTISEMENT

ಇಪಿಎಫ್‌ಒ: ಇಟಿಎಫ್‌ ಹೂಡಿಕೆ ಮಿತಿ ಹೆಚ್ಚಳ ಇಲ್ಲ

ಧರ್ಮದರ್ಶಿ ಮಂಡಳಿ ಸಭೆಯ ಪರಿಷ್ಕೃತ ಕಾರ್ಯಸೂಚಿ

ಪಿಟಿಐ
Published 30 ಜುಲೈ 2022, 19:33 IST
Last Updated 30 ಜುಲೈ 2022, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ ವಿನಿಯಮ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಭವಿಷ್ಯ ನಿಧಿಯ ಹೂಡಿಕೆ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಕೈಬಿಡಲಾಗಿದೆ’ ಎಂದು ಇಪಿಎಫ್‌ಒ ಟ್ರಸ್ಟಿ ಹರ್ಭಜನ್‌ ಸಿಂಗ್‌ ಸಿದ್ದು ತಿಳಿಸಿದ್ದಾರೆ.

ಸದ್ಯ, ಶೇ 15ರಷ್ಟನ್ನು ಇಟಿಎಫ್‌ಗಳಲ್ಲಿ ತೊಡಗಿಸಲಾಗುತ್ತಿದೆ. ಎರಡು ದಿನಗಳ ಧರ್ಮದರ್ಶಿಗಳ ಮಂಡಳಿ ಸಭೆಯು ಶನಿವಾರ ಮುಕ್ತಾಯವಾದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಅವರು ಮಾತನಾಡಿದರು.

ಧರ್ಮದರ್ಶಿಗಳ ಮಂಡಳಿ ಸಭೆಯ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಷೇರು ಅಥವಾ ಷೇರು ಸಂಬಂಧಿತ ಯೋಜನೆಗಳಲ್ಲಿ ಭವಿಷ್ಯ ನಿಧಿ ಹೂಡಿಕೆಯನ್ನು ಹೆಚ್ಚಿಸುವ ಪ್ರಸ್ತಾವನ್ನು ಕೈಬಿಡಲಾಗಿದೆ.

ADVERTISEMENT

‘ಹೂಡಿಕೆ ಮಿತಿ ಹೆಚ್ಚಿಸುವುದಕ್ಕೆ ಇಪಿಎಫ್‌ಒನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೌಕರರ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿ
ದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಷೇರುಮಾರುಕಟ್ಟೆಯು ಚಂಚಲ ಆಗಿರುವುದರಿಂದ ಹೂಡಿಕೆಯ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೂ ಮೊದಲು ಆ ಬಗ್ಗೆ ಇನ್ನೂ ಹೆಚ್ಚಿನ ಸಮಾಲೋಚನೆ ನಡೆಸುವ ಅಗತ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಿಂಚಣಿ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ: ಇಪಿಎಫ್‌ಒ ವ್ಯಾಪ್ತಿಗೆ ಬರುವ 73 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಏಕಕಾಲಕ್ಕೆ ಪಿಂಚಣಿ ಮೊತ್ತ ವಿತರಣೆ ಮಾಡುವ ಕೇಂದ್ರೀಕೃತ ವ್ಯವಸ್ಥೆಗೆ ಇಪಿಎಫ್‌ಇ ಧರ್ಮದರ್ಶಿಗಳ ಮಂಡಳಿ ಒಪ್ಪಿಗೆ ನೀಡಿದೆ. ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಪ್ರಕಟಣೆಯು ಶನಿವಾರ ತಿಳಿಸಿದೆ.

ಪಿಂಚಣಿದಾರರಿಗೆ ಮುಖ ಚಹರೆ ಗುರುತಿಸುವ ತಂತ್ರಜ್ಞಾನದ (ಫೇಸ್‌ ರೆಕಗ್ನಿಷನ್‌) ಮೂಲಕ ಡಿಜಿಟಲ್‌ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬಯೊಮೆಟ್ರಿಕ್‌ (ಬೆರಳಚ್ಚು ಮತ್ತು ಐರಿಸ್‌) ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆ ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.