ಬೆಂಗಳೂರು: ‘ಬಿಜೆಪಿಯವರು ಗೋಡ್ಸೆ ಸಂತತಿಯವರು. ಅವರ ಫೋಟೊ ಇಟ್ಟುಕೊಂಡು ಪ್ರತಿಭಟನೆ ಮಾಡಲಿ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಡಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಜಿಸಿಸಿ ಕರಡು ನೀತಿ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಡಿಯೂರಪ್ಪ, ಮುನಿರತ್ನ ಪ್ರಕರಣ ಗೊತ್ತಿದೆ. ಆದರೂ, ಕಾಂಗ್ರೆಸ್ ಬಗ್ಗೆಯೇ ಮಾತನಾಡುತ್ತಾರೆ. ಮೋದಿ ಅವರಿಗೆ ನೈತಿಕತೆ ಇದ್ದರೆ ಈ ಇಬ್ಬರನ್ನು ಪಕ್ಷದಿಂದ ಉಚ್ಚಾಟಿಸಲಿ’ ಎಂದು ಆಗ್ರಹಿಸಿದರು.
ಬಿಜೆಪಿಯವರ ಬಳಿ ರಾಜ್ಯಪಾಲರಿದ್ದರೆ, ನಮ್ಮ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವಿದೆ. ರಾಜ್ಯಪಾಲರ ಕಚೇರಿಯ ಸಿಬ್ಬಂದಿ ಸರ್ಕಾರದ ಇಲಾಖೆಯ ಕಾರ್ಯದರ್ಶಿ ಇಲ್ಲವೇ ಅಧಿಕಾರಿಗಳಿಗೆ ಪತ್ರ ಬರೆಯಬೇಕು. ಆದರೆ, ರಾಜ್ಯಪಾಲರೇ ಅಧಿಕಾರಿಗಳಿಗೆ ಪತ್ರ ಬರೆದರೆ ಹೇಗೆ? ಪ್ರತಿಯೊಂದು ವ್ಯವಸ್ಥಿತ ಮಾರ್ಗದ ಮೂಲಕ ನಡೆಯಬೇಕು ಎಂದು ಹೇಳಿದರು.
‘ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದಾಗ ಒಂದು ಉದ್ಯೋಗ ಸೃಷ್ಟಿಗೆ ₹3.20 ಕೋಟಿಯನ್ನು ಸಬ್ಸಿಡಿಯಾಗಿ ಗುಜರಾತ್ ಸರ್ಕಾರ ನೀಡುತ್ತಿದೆ. ಇದು ಸರಿಯೇ? ಎಂದು ಪ್ರಶ್ನಿಸಿದ್ದರು. ಆದರೆ, ನಂತರ ಇದರ ಬಗ್ಗೆ ಮೋದಿ ಅವರು ಕುಮಾರಸ್ವಾಮಿಗೆ ಏನು ಹೇಳಿದರೋ ಏನೋ ಅದರ ಬಗ್ಗೆ ಚಕಾರವನ್ನೇ ಈಗ ಎತ್ತುತ್ತಿಲ್ಲ ಎಂದರು.
ಕುಮಾರಸ್ವಾಮಿ ಅವರು ಕೇಂದ್ರದ ಸಚಿವರು. ಆದರೆ, ಅವರು ಮೋದಿಗೆ ಮಂತ್ರಿ ಆಗಿದ್ದಾರೆ. ಮೋದಿ ಕಿವಿಗೆ ಇಂಪು ನೀಡುವ ಹಾಗೇ ಮಾತನಾಡುತ್ತಿದ್ದಾರೆ. 5 ಸೆಮಿಕಂಡಕ್ಟರ್ ಪ್ರಸ್ತಾವಗಳಲ್ಲಿ 4 ಗುಜರಾತ್‌ಗೆ ಹೋಗಿದ್ದರೆ, ಮತ್ತೊಂದು ಅಸ್ಸಾಂಗೆ ಹೋಗಿದೆ. ಅಸ್ಸಾಂನಲ್ಲಿ ನವೋದ್ಯಮದ ಬಗ್ಗೆ ಕೇಳಿದ್ದೇ ವಿರಳ. ಅಲ್ಲಿ ಮಾನವ ಸಂಪನ್ಮೂಲ ಉತ್ತಮವಾಗಿದೆ ಎಂದು ಕೇಳಿದ್ದೆ ಇಲ್ಲ. ಆದರೂ ಅಲ್ಲಿಗೆ ಹೋಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.