ADVERTISEMENT

ಎಲ್‌ಆ್ಯಂಡ್‌ಟಿ, ಎಚ್‌ಎಎಲ್‌ನಿಂದ ಪಿಎಸ್‌ಎ‌ಲ್‌ವಿ ಉಡಾವಣೆ: ಎ.ಟಿ. ರಾಮಚಂದಾನಿ

ಪಿಟಿಐ
Published 19 ನವೆಂಬರ್ 2025, 13:46 IST
Last Updated 19 ನವೆಂಬರ್ 2025, 13:46 IST
ಪಿಎಸ್‌ಎಲ್‌ವಿ ಉಡಾವಣಾ ವಾಹನ – ಸಾಂದರ್ಭಿಕ ಚಿತ್ರ
ಪಿಎಸ್‌ಎಲ್‌ವಿ ಉಡಾವಣಾ ವಾಹನ – ಸಾಂದರ್ಭಿಕ ಚಿತ್ರ   

ನವದೆಹಲಿ: ವಾಣಿಜ್ಯ ಉದ್ದೇಶದಿಂದ ನಿರ್ಮಾಣ ಮಾಡಿರುವ ಮೊದಲ ಪಿಎಸ್‌ಎಲ್‌ವಿ (ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ) ಮೂಲಕ ಒಶೀನ್‌ಸ್ಯಾಟ್‌ ಉಪಗ್ರಹವನ್ನು ಮುಂದಿನ ವರ್ಷದ ಆರಂಭದಲ್ಲಿ ಕಕ್ಷೆಗೆ ಸೇರಿಸುವ ಸಾಧ್ಯತೆ ಇದೆ ಎಂದು ಎಲ್‌ಆ್ಯಂಡ್‌ಟಿ ಹಿರಿಯ ಅಧಿಕಾರಿ ಎ.ಟಿ. ರಾಮಚಂದಾನಿ ತಿಳಿಸಿದ್ದಾರೆ.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮತ್ತು ಎಲ್‌ಆ್ಯಂಡ್‌ಟಿ ಜೊತೆಯಾಗಿ ಹುಟ್ಟುಹಾಕಿರುವ ಒಕ್ಕೂಟವೊಂದು ಮೊದಲ ಪಿಎಸ್‌ಎಲ್‌ವಿ ರಾಕೆಟ್‌ಅನ್ನು ತಾನೇ ಸಿದ್ಧಪಡಿಸಿದೆ. ಇದು ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸದೊಂದು ಅಧ್ಯಾಯ ಆರಂಭಿಸಿದಂತಿದೆ ಎಂದು ಹೇಳಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಪಿಎಸ್‌ಎಲ್‌ವಿ–ಎಕ್ಸ್‌ಎಲ್‌ ರಾಕೆಟ್‌ ತಯಾರಿಕೆಗೆ ಎಚ್‌ಎಎಲ್‌ ಮತ್ತು ಎಲ್‌ಆ್ಯಂಡ್‌ಟಿ ಒಕ್ಕೂಟದ ಜೊತೆ 2022ರಲ್ಲಿ ಒಪ್ಪಂದ ಮಾಡಿಕೊಂಡಿದೆ.

ADVERTISEMENT

‘ಉಪಗ್ರಹಗಳಿಗೆ ಬೇಡಿಕೆಯು ಹೆಚ್ಚಿರುತ್ತದೆ ಎಂಬುದು ಇಸ್ರೊ ನಂಬಿಕೆ, ಮುಂದಿನ ವರ್ಷ ನಾವು ಎರಡು ಅಥವಾ ಮೂರು ಉಡಾವಣೆ ನಡೆಸಲಿದ್ದೇವೆ’ ಎಂದು ಅವರು ತಿಳಿಸಿದರು. ಉಪಗ್ರಹ ಉಡಾವಣಾ ವಾಹನದ ಕೆಲವು ಬಿಡಿಭಾಗಗಳ ತಯಾರಿಕೆಯ ಸಂದರ್ಭದಲ್ಲಿ ಸವಾಲುಗಳು ಎದುರಾದರೂ, ಇಸ್ರೊ ಅಧಿಕಾರಿಗಳು ಅವುಗಳನ್ನು ಪರಿಹರಿಸಿಕೊಟ್ಟರು ಎಂದು ರಾಮಚಂದಾನಿ ಹೇಳಿದ್ದಾರೆ.

ಎಲ್‌ಆ್ಯಂಡ್‌ಟಿಯಿಂದ ಬಿವಿಎಸ್‌10 ಸಿಂಧು: ಭಾರತೀಯ ಸೇನೆಗೆ ‘ಬಿವಿಎಸ್‌10 ಸಿಂಧು’ ವಾಹನ ತಯಾರಿಸಿ ಕೊಡುವ ಗುತ್ತಿಗೆಯನ್ನು ಎಲ್‌ಆ್ಯಂಡ್‌ಟಿ ಹಾಗೂ ಬಿಎಇ ಸಿಸ್ಟಮ್ಸ್‌ ಪಡೆದುಕೊಂಡಿವೆ. ಈ ವಾಹನವು ಯಾವುದೇ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ಈ ಗುತ್ತಿಗೆಯ ಪ್ರಕಾರ, ಎಲ್‌ಆ್ಯಂಡ್‌ಟಿ ಕಂಪನಿಯು ‘ಬಿವಿಎಸ್‌10 ಸಿಂಧು’ ವಾಹನಗಳನ್ನು ತಯಾರಿಸಲಿದೆ. ಇದಕ್ಕೆ ಬಿಎಇ ಸಿಸ್ಟಮ್ಸ್‌ ಕಂಪನಿಯು ತಾಂತ್ರಿಕ ನೆರವು ಒದಗಿಸಲಿದೆ. ಎಲ್‌ಆ್ಯಂಡ್‌ಟಿ ಕಂಪನಿಯು ಈ ಮಾಹಿತಿಯನ್ನು ಷೇರುಪೇಟೆಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.