ನವದೆಹಲಿ : ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಸುರಿದ ಪರಿಣಾಮವಾಗಿ ಪ್ರಸಕ್ತ ಹಂಗಾಮಿನಲ್ಲಿ ಸೆಪ್ಟೆಂಬರ್ 8ರವರೆಗೆ ಬೇಳೆಕಾಳುಗಳ ಬಿತ್ತನೆಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಇಳಿಕೆ ಕಂಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈವರೆಗೆ ದೇಶದಲ್ಲಿ ಬೇಳೆಕಾಳು ಬಿತ್ತನೆಯು ಶೇ 8.58ರಷ್ಟು ಇಳಿಕೆ ಆಗಿದ್ದು, ಒಟ್ಟು 119.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಕಳೆದ ವರ್ಷ 20.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಳೆಕಾಳು ಬಿತ್ತನೆ ನಡೆದಿತ್ತು. ಈ ವರ್ಷ ಈವರೆಗೆ 16.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಮಧ್ಯಪ್ರದೇಶದಲ್ಲಿ ಬಿತ್ತನೆಯು 23.44 ಲಕ್ಷ ಹೆಕ್ಟೇರ್‌ನಿಂದ 19.72 ಲಕ್ಷ ಹೆಕ್ಟೇರ್‌ಗೆ ಇಳಿಕೆ ಕಂಡಿದೆ. ಮಹಾರಾಷ್ಟ್ರದಲ್ಲಿ ಬೇಳೆಕಾಳು ಬಿತ್ತನೆ 18.89 ಲಕ್ಷ ಹೆಕ್ಟೇರ್‌ನಿಂದ 16.15 ಲಕ್ಷ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಆದರೆ, ರಾಜಸ್ಥಾನದಲ್ಲಿ ಬೇಳೆಕಾಳು ಬಿತ್ತನೆಯು 33.99 ಲಕ್ಷ ಹೆಕ್ಟೇರ್‌ನಿಂದ 35.30 ಲಕ್ಷ ಹೆಕ್ಟೇರ್‌ಗೆ ಏರಿಕೆ ಕಂಡಿದೆ.
ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮುಂಗಾರು ಬೆಳೆಗಳ ಬಿತ್ತನೆ ಕಾರ್ಯ ನಡೆಯುತ್ತದೆ. ಭತ್ತವು ಮುಂಗಾರಿನ ಪ್ರಮುಖ ಬೆಳೆಯಾಗಿದ್ದು, ಬೇಳೆಕಾಳು, ಎಣ್ಣೆಕಾಳುಗಳು, ಹತ್ತಿ ಮತ್ತು ಕಬ್ಬು ಸಹ ಬೆಳೆಯಲಾಗುತ್ತದೆ. ಹುರುಳಿ ಬಿತ್ತನೆ 13.68 ಲಕ್ಷ ಹೆಕ್ಟೇರ್‌ನಿಂದ 31 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಮುಂಗಾರು ಬೆಳೆಗಳ ಒಟ್ಟು ಬಿತ್ತನೆಯು ಸೆಪ್ಟೆಂಬರ್ 8ರ ಅಂತ್ಯಕ್ಕೆ 1,088.50 ಲಕ್ಷ ಹೆಕ್ಟೇರ್‌ನಷ್ಟು ಆಗಿದೆ. ಹಿಂದಿನ ವರ್ಷದ ಮುಂಗಾರು ಅವಧಿಯಲ್ಲಿ 1,088.02 ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.