ADVERTISEMENT

ಸದ್ಯಕ್ಕೆ ಪೆಟ್ರೋಲ್ ಬೆಲೆ ಇಳಿಕೆಯಿಲ್ಲ: ಇಂಧನ ಸಚಿವ ಹರ್ದೀಪ್ ಸಿಂಗ್

ಪಿಟಿಐ
Published 22 ಜನವರಿ 2023, 15:41 IST
Last Updated 22 ಜನವರಿ 2023, 15:41 IST
   

ವಾರಾಣಸಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಿಂದಿನ ನಷ್ಟವನ್ನು ಮರು ಗಳಿಕೆ ಮಾಡಿಕೊಳ್ಳುವವರೆಗೂ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯವಿಲ್ಲ. ನಷ್ಟ ಭರ್ತಿಯಾದ ಬಳಿಕವಷ್ಟೇ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಕಳೆದ 15 ತಿಂಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾರುಕಟ್ಟೆ ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಿಲ್ಲ. ಇದರಿಂದ ಉಂಟಾದ ನಷ್ಟವನ್ನು ಈಗ ಮರುಪಾವತಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

‘ನಷ್ಟ ಕೊನೆಗೊಂಡರೆ, ತೈಲ ಬೆಲೆ ಕಡಿಮೆಯಾಗಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ADVERTISEMENT

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಜಾಗತಿಕ ಇಂಧನ ಬೆಲೆ ಏರಿಕೆಯಾಗಿದೆ. ಆದರೆ ಗ್ರಾಹಕರಿಗೆ ಅದರ ಹೊರೆಯಾಗದಂತೆ ತೈಲ ಕಂಪನಿಗಳು ಜವಾಬ್ದಾರಿ ಮೆರೆದಿವೆ. ನಾವು ಅವರಿಗೆ ಬೆಲೆ ಏರಿಸದೆ ಹೊರೆ ಹೊತ್ತುಕೊಳ್ಳುವಂತೆ ತೈಲ ಕಂಪನಿಗಳಿಗೆ ಕೇಳಿಲ್ಲ. ಅವು ಅದನ್ನು ಸ್ವಂತವಾಗಿ ಮಾಡಿವೆ ಎಂದು ಪುರಿ ತಿಳಿಸಿದರು.

ಜೂನ್ 24,2022ರ ಅಂತ್ಯಕ್ಕೆ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ ಮೇಲೆ ₹17.4 ಮತ್ತು ಲೀಟರ್ ಡೀಸೆಲ್‌ ಮೇಲೆ ₹27.7 ದಾಖಲೆಯ ನಷ್ಟ ಅನುಭವಿಸಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.