ADVERTISEMENT

ಒಪೆಕ್‌ನಿಂದ ಹೊರಬರಲಿದೆ ಕತಾರ್‌; ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಳದತ್ತ ಚಿತ್ತ

ಏಜೆನ್ಸೀಸ್
Published 3 ಡಿಸೆಂಬರ್ 2018, 11:31 IST
Last Updated 3 ಡಿಸೆಂಬರ್ 2018, 11:31 IST
   

ದೋಹಾ(ಕತಾರ್‌):ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌)ಯಿಂದ ಕತಾರ್‌ 2019ರ ಜನವರಿಯಲ್ಲಿ ಹೊರಬರುತ್ತಿರುವುದಾಗಿ ದೇಶದ ಇಂಧನ ಸಚಿವ ಸಾದ್–ಅಲ್‌–ಕಾಬಿ ಸೋಮವಾರ ಹೇಳಿದ್ದಾರೆ.

ಒಪೆಕ್‌ರಾಷ್ಟ್ರಗಳ ಪೈಕಿ ಅತಿ ಕಡಿಮೆ ತೈಲ ಉತ್ಪಾದನೆ ಮಾಡುವ ಕತಾರ್, ಜಗತ್ತಿನಲ್ಲೇ ಅತಿ ಹೆಚ್ಚು ನೈಸರ್ಗಿಕ ಅನಿಲ ಪೂರೈಕೆ ಮಾಡುವ ರಾಷ್ಟ್ರವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನೀತಿ ರೂಪಿಸುತ್ತಿದ್ದು, ಅನಿಲ ಉದ್ಯಮದ ಬಗ್ಗೆ ಗಮನ ಕೇಂದ್ರೀಕರಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ತೈಲ ಪೂರೈಕೆ ಕಡಿತಗೊಳಿಸುವ ಬಗ್ಗೆ ರಷ್ಯಾ ಸೇರಿದಂತೆ ಒಪೆಕ್‌ ರಾಷ್ಟ್ರಗಳು ಡಿಸೆಂಬರ್‌ 6 ಮತ್ತು 7ರಂದು ಸಭೆ ಸೇರಿ ನಿರ್ಧಾರ ಕೈಗೊಳ್ಳಲಿವೆ. ಇದೀಗ ಒಪೆಕ್‌ನಿಂದ ಹೊರಬರುವ ನಿರ್ಧಾರ ಪ್ರಕಟಿಸಿರುವ ಕತಾರ್‌, ವಿಯೆನ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗುವುದಾಗಿ ಸ್ಪಷ್ಟಪಡಿಸಿದೆ.

ADVERTISEMENT

ಕಳೆದ 57 ವರ್ಷಗಳಿಂದ ಒಪೆಕ್‌ನೊಂದಿಗೆ ಬಾಂಧವ್ಯ ಹೊಂದಿರುವ ಕತಾರ್‌ಗೆ ಇದು ಸುಲಭದ ನಿರ್ಧಾರವಾಗಿರಲಿಲ್ಲ ಎಂದಿರುವ ಸಚಿವ ಸಾದ್‌–ಅಲ್‌–ಕಾಬಿ, ಒಪೆಕ್ ಹೊರತಾದ ತೈಲ ಉತ್ಪಾದನಾ ರಾಷ್ಟ್ರಗಳು ಅನುಸರಿಸುವ ಕ್ರಮಗಳಿಗೆ ನಾವೂ ಬದ್ಧರಾಗಿರುತ್ತೇವೆ ಎಂದಿದ್ದಾರೆ.

ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಉತ್ಪಾದನೆ ಪ್ರಮಾಣವನ್ನು ವಾರ್ಷಿಕ 7.70 ಕೋಟಿ ಟನ್‌ಗಳಿಂದ 11 ಕೋಟಿ ಟನ್‌ಗಳಿಗೆ ಹೆಚ್ಚಿಸುವ ಬಗ್ಗೆ ಕತಾರ್‌ ಗಮನ ಹರಿಸುತ್ತಿದೆ. ಸೌದಿ ಅರೇಬಿಯಾ ಸೇರಿ ಒಪೆಕ್‌ನ ಇತರೆ ಮೂರು ಅರಬ್‌ ರಾಷ್ಟ್ರಗಳು 2017ರ ಜೂನ್‌ನಿಂದ ಕತಾರ್‌ನ್ನು ರಾಜಕೀಯ ಮತ್ತು ಆರ್ಥಿಕವಾಗಿ ಬಹಿಷ್ಕರಿಸುವುದಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇಂಧನ ಸಚಿವ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.