ADVERTISEMENT

ಪ್ರಶ್ನೋತ್ತರ: ಪಿಂಚಣಿ ರೂಪದಲ್ಲಿ ಆದಾಯ, ಆರೋಗ್ಯ ವಿಮೆ ವಿಚಾರದಲ್ಲಿ ವಿವರಣೆ ನೀಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:30 IST
Last Updated 28 ಜನವರಿ 2020, 19:30 IST
ಯು.ಪಿ. ಪುರಾಣಿಕ್‌
ಯು.ಪಿ. ಪುರಾಣಿಕ್‌   

ರವಿತೇಜ್, ಊರು ಬೇಡ

* ನಾನು ಷೇರುಪೇಟೆ ಮತ್ತು ಇತರ ಹೂಡಿಕೆ ಯೋಜನೆಗಳಲ್ಲಿ ಇದುವರೆಗೆ ಹಣ ತೊಡಗಿಸಿ ಸುಮಾರು
₹ 2 ಲಕ್ಷ ಕಳೆದುಕೊಂಡಿರುವೆ. ಈಗ ನಿಮ್ಮ ಸಲಹೆಯಂತೆ FD/RD ಮಾಡಲು ಬಯಸುತ್ತೇನೆ. ಮಗಳ ವಿದ್ಯಾಭ್ಯಾಸ, ನಿವೃತ್ತಿಯ ನಂತರ ಪಿಂಚಣಿ ರೂಪದಲ್ಲಿ ಆದಾಯ, ಆರೋಗ್ಯ ವಿಮೆ ವಿಚಾರದಲ್ಲಿ ವಿವರಣೆ ನೀಡಿ.

ಉತ್ತರ: ನೀವು ಷೇರು ಮಾರುಕಟ್ಟೆ ಹಾಗೂ ಇತರ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಿ ದೊಡ್ಡ ಮೊತ್ತ ಕಳೆದುಕೊಂಡಿರುವುದು ನೋಡಿ ನನಗೂ ಸಂಕಟವಾಗಿದೆ. ಈ ವ್ಯವಸ್ಥೆಯಲ್ಲಿ ಜೂಜಾಟದ (Speeulation) ಅನುಭವವಾಗುತ್ತದೆ. ಜಗತ್ತಿನ ಆರ್ಥಿಕ ಅಸ್ಥಿರತೆ ನೋಡುವಾಗ ಮಧ್ಯಮ ವರ್ಗದವರಿಗೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳೇ ಲೇಸು. ನಿಮ್ಮ ಉಳಿತಾಯದ ಪ್ಲ್ಯಾನ್ ತಿಳಿಸುವ ಮುನ್ನ ಆದಾಯದ ಚಿತ್ರಣ ನೀವು ಕೊಟ್ಟಿಲ್ಲ. ನಿಮ್ಮ ತಿಂಗಳ ಆದಾಯದಲ್ಲಿ ಕನಿಷ್ಠ ಶೇ 25 ರಷ್ಟು RD 10 ವರ್ಷಗಳ ಅವಧಿಗೆ ಮಾಡಿರಿ. 10 ವರ್ಷದ ನಂತರವೂ ಈ ಪ್ರಕ್ರಿಯೆ ಮುಂದುವರೆಸಿ. ಹೀಗೆ ಉಳಿತಾಯ ಮಾಡಿದಲ್ಲಿ ಜೀವನದ ಸಂಜೆಯಲ್ಲಿ ಬಡ್ಡಿಯಿಂದಲೇ ಜೀವಿಸಬಹುದು. ಮಗಳ ವಯಸ್ಸು 10 ವರ್ಷದೊಳಗಿರುವಲ್ಲಿ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ₹ 5,000 ಉಳಿಸಿರಿ. ಮಗಳ ವಿದ್ಯಾಭ್ಯಾಸ/ ಮದುವೆಗೆ ಇದು ನೆರವಿಗೆ ಬರುತ್ತದೆ. ಆರೋಗ್ಯ ವಿಮೆ ಅವಶ್ಯ ಕಂಡಲ್ಲಿ ಸಿಂಡಿಕೇಟ್ ಬ್ಯಾಂಕ್ ‘ಸಿಂಡ್ ಆರೋಗ್ಯ’ ವಿಮೆ ಮಾಡಿಸಿ.

ADVERTISEMENT

1. ವಿನಾಯಕ ದುರ್ಗ, ಬೆಳಗಾವಿ, 2. ನಟರಾಜ್ ಬುಕ್ಕಮ್ ಹಾಗೂ3. ಲಕ್ಷ್ಮಿ, ವಿಜಯನಗರ, ಬೆಂಗಳೂರು

* ದೇಶದ ಜಿಡಿಪಿ ದಿನೇ ದಿನೇ ತಗ್ಗುತ್ತಿದೆ. ಬ್ಯಾಂಕುಗಳು ಒಂದರೊಂದಿಗೆ ವಿಲೀನವಾಗುತ್ತಿವೆ. ಇದರಿಂದ ಠೇವಣಿದಾರರಿಗೆ ಯಾವುದೇ ತೊಂದರೆಯಾಗಲಾರದೇ ಎನ್ನುವುದನ್ನು ವಿವರವಾಗಿ ತಿಳಿಸಿರಿ.

ಉತ್ತರ: ನಿಮ್ಮಲ್ಲಿ ಮೂಡಿರುವ ಸಂಶಯ ಅನೇಕರಲ್ಲಿಯೂ ಕಂಡುಬರುತ್ತದೆ. ಬಹಳಷ್ಟು ಜನರು ನನಗೆ ದೂರವಾಣಿ ಕರೆ ಮಾಡಿ ಕೇಳುತ್ತಿದ್ದಾರೆ. ಒಂದು ಸಂಸ್ಥೆಯ ನೌಕರ ಅದೇ ಸಂಸ್ಥೆಯ ಇನ್ನೊಂದು ಶಾಖೆಗೆ ವರ್ಗವಾದರೆ, ಆತನಿಗೆ ಊರು ಬದಲಾದರೂ, ವೃತ್ತಿಯ ಕೆಲಸದಲ್ಲಿ ಬದಲಾವಣೆ ಕಾಣುವುದಿಲ್ಲ. ಅದೇ ರೀತಿ ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿನೊಂದಿಗೆ ವಿಲೀನವಾದಾಗ ಎರಡೂ ಬ್ಯಾಂಕುಗಳ ಮೂಲ ತತ್ವ ಒಂದೇ ಇರುವುದರಿಂದ ಠೇವಣಿದಾರರಿಗೆ ಏನೂ ತೊಂದರೆಯಾಗುವುದಿಲ್ಲ. ಮುಖ್ಯವಾಗಿ ಠೇವಣಿದಾರರಿಗೆ ಯಾವುದೇ ಬಗೆಯ ತೊಂದರೆ ಅಥವಾ ಅನ್ಯಾಯ ಆಗುವ ಸಾಧ್ಯತೆಯೇ ಇಲ್ಲ. ಇನ್ನು ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿತಕ್ಕೂ ಬ್ಯಾಂಕ್ ಠೇವಣಿಗೂ ಯಾವುದೇ ಸಂಬಂಧವಿಲ್ಲ. ಆರ್ಥಿಕತೆಯಲ್ಲಿ ಮಂದಗತಿಯ ಬೆಳವಣಿಗೆ ಕಂಡರೆ, ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಸ್ವಲ್ಪಮಟ್ಟಿನ ಕಡಿತವಾಗುವ ಸಂದರ್ಭವಿದೆ. ಆದರೆ, ನೀವು ಈಗಾಗಲೇ ಹೊಂದಿರುವ ಠೇವಣಿಯ ಮೇಲಿನ ಬಡ್ಡಿದರವು ಠೇವಣಿ ಅವಧಿ ಮುಗಿಯುವ ತನಕ ಕಡಿಮೆ ಆಗುವುದಿಲ್ಲ. ಹೀಗಾಗಿ ನೆಮ್ಮದಿಯಿಂದ ಇರಿ. ನಿಮ್ಮೆಲ್ಲರ ಈ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.