ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 19:30 IST
Last Updated 24 ಡಿಸೆಂಬರ್ 2019, 19:30 IST
ಯು. ಪಿ. ಪುರಾಣಿಕ್
ಯು. ಪಿ. ಪುರಾಣಿಕ್   

- ಕಮಲಮ್ಮ, ಮೈಸೂರು

* ವಯಸ್ಸು 74. ವಿಧವೆ. ಸರ್ಕಾರದಿಂದ ₹ 24,000 ಪಿಂಚಣಿ ಬರುತ್ತದೆ. ನಿವೃತ್ತಿಯಿಂದ ಬಂದ ₹ 25 ಲಕ್ಷ ವಿವಿಧ ಬ್ಯಾಂಕುಗಳಲ್ಲಿ ಅವಧಿ ಠೇವಣಿ ಇರಿಸಿದ್ದೇನೆ. ಸ್ವಂತ ಮನೆ ಇದೆ. ತೆರಿಗೆ ಬರುತ್ತದೆಯೇ ತಿಳಿಸಿರಿ. ಸ್ಥಿರ ಠೇವಣಿಯಲ್ಲಿ ಇರಿಸಿರುವುದು ಭದ್ರವಾಗಿರುತ್ತದೆಯೇ. ಕೆಲವರು ಬ್ಯಾಂಕಿನಲ್ಲಿ ಠೇವಣಿ ಇರಿಸಿದರೆ ತೆರಿಗೆ ಕೊಡಬೇಕಾಗುತ್ತದೆ. ಮನೆಯಲ್ಲಿಯೇ ಇಟ್ಟುಕೊಳ್ಳಿ ಎನ್ನುತ್ತಾರೆ. ಹಣ ಮನೆಯಲ್ಲಿ ಇಡುವುದು ಸೂಕ್ತವೇ. ನೀವು ಕೊಡುವ ಸಲಹೆ ನಮ್ಮಂತಹ ಹಿರಿಯ ನಾಗರಿಕರಿಗೆ ನಿಜವಾಗಿ ದಾರಿ ದೀಪದಂತಿದೆ.

ಉತ್ತರ: ಈ ಪ್ರಶ್ನೋತ್ತರ ಅಂಕಣ ಪ್ರಾರಂಭವಾಗಿರುವುದೇ ಜನ ಸಾಮಾನ್ಯರಿಗೆ ಹಣಕಾಸು ವಿಷಯಗಳ ನಿರ್ವಹಣೆ ಅನುಕೂಲವಾಗಲಿ ಎಂಬ ಉದ್ದೇಶದಿಂದಾಗಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. 1–4–2019 ರಿಂದ ಎಲ್ಲಾ ವರ್ಗದ ಜನರ ವಾರ್ಷಿಕ ಒಟ್ಟು ಆದಾಯ ₹ 5 ಲಕ್ಷದೊಳಗಿರುವಲ್ಲಿ, ಅಂತಹ ವ್ಯಕ್ತಿಗಳು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ನಿಮ್ಮ ಪಿಂಚಣಿ ಆದಾಯ ಹಾಗೂ ₹ 25 ಲಕ್ಷದಿಂದ ಬರುವ ಬಡ್ಡಿ ಆದಾಯ ವಾರ್ಷಿಕವಾಗಿ ಪರಿಗಣಿಸುವಾಗ ಇಂತಹ ಆದಾಯ ₹ 5 ಲಕ್ಷದ ಪರಿಮಿತಿಯೊಳಗೆ ಬರುತ್ತದೆ.

ADVERTISEMENT

ನೀವು ಪಿಂಚಣಿದಾರರು ಆಗಿರುವುದರಿಂದ ₹ 5 ಲಕ್ಷ ಹೊರತುಪಡಿಸಿ, ಬ್ಯಾಂಕ್ ಠೇವಣಿಯಿಂದ ಬರುವ ಬಡ್ಡಿಯಲ್ಲಿ ಸೆಕ್ಷನ್ 80TTB ಆಧಾರದ ಮೇಲೆ ಗರಿಷ್ಠ ₹ 50,000, ಸೆಕ್ಷನ್ 16 ಸ್ಟ್ಯಾಂಡರ್ಡ್ ಡಿಡಕ್ಷನ್‌ನಲ್ಲಿ ₹ 50,000 ವಿನಾಯಿತಿ ಇದೆ. ಒಟ್ಟಿನಲ್ಲಿ ನಿಮ್ಮ ಒಟ್ಟು ವಾರ್ಷಿಕ ಪಿಂಚಣಿ ಹಾಗೂ ಬಡ್ಡಿ ಆದಾಯ ₹ 6 ಲಕ್ಷದ ತನಕ ನೀವು ಆದಾಯ ತೆರಿಗೆ ಕೊಡುವುದು ಬೇಡ. ಬ್ಯಾಂಕ್‌ ಠೇವಣಿ ಭದ್ರವಾಗಿರುತ್ತದೆ. ಅವರಿವರ ಮಾತು ಕೇಳಿ ನಗದು ಎಂದಿಗೂ ಮನೆಯಲ್ಲಿ ಇರಿಸಬೇಡಿ. ನಿಮಗೆ ₹ 25 ಲಕ್ಷ ಮನೆಯಲ್ಲಿ ಇರಿಸಿ ಎಂದು ಕೆಲವರು ಸಲಹೆ ನೀಡಿರುವುದು ಸೋಜಿಗ! ಅವರ ಮಾತಿಗೆ ಕಿವಿ ಕೊಡಬೇಡಿ.

- ಮಂಜುಳ. ಎನ್‌., ಶಿವಮೊಗ್ಗ

* ಪ್ರಾಥಮಿಕ ಶಾಲಾ ಶಿಕ್ಷಕಿ. ನಾನು ಎಸ್‌ಬಿಐನ ಉಳಿತಾಯ ಖಾತೆಯಲ್ಲಿ ₹ 5 ಲಕ್ಷ ಹಣ ಇರಿಸಿದ್ದೇನೆ. ಈ ಹಣ ಎಸ್‌ಬಿಐ ಸೇವಿಂಗ್ಸ್ ಫಂಡ್‌ನಲ್ಲಿ ಇಟ್ಟರೆ ತೆರಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗೆ ಇಡಬಹುದಾ?

ಉತ್ತರ: ನೀವು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ನಿಮಗೆ ವಾರ್ಷಿಕವಾಗಿ₹ 5 ಲಕ್ಷದೊಳಗೆ ಸಂಬಳದ ಆದಾಯವಿರಬೇಕು ಎಂದು ಭಾವಿಸುವೆ. ಇದೇ ವೇಳೆ, ಸೆಕ್ಷನ್ 80 TTB ಆಧಾರದ ಮೇಲೆ ಬ್ಯಾಂಕ್ ಠೇವಣಿ ಮೇಲಿನ ಗರಿಷ್ಠ₹ 50,000 ಬಡ್ಡಿ ಹಾಗೂ ಸೆಕ್ಷನ್ 16 ಆಧಾರದ ಮೇಲೆ ಸ್ಟ್ಯಾಂಡರ್ಡ್ ಡಿಡಕ್ಷನ್₹ 50,000 ಹೀಗೆ ಎಲ್ಲಾ ಒಟ್ಟಿನಲ್ಲಿ₹ 6 ಲಕ್ಷ ವಾರ್ಷಿಕ ಆದಾಯ ಬಂದರೂ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಉಳಿತಾಯದಲ್ಲಿ ಭದ್ರತೆ, ದ್ರವ್ಯತೆ ಹಾಗೂ ನಿಖರವಾದ ವರಮಾನ ಇರಬೇಕು. ಎಸ್.ಬಿ.ಐ. ಸೇವಿಂ‌ಗ್ಸ್ ಫಂಡ್ ಪ್ರಾಯಶಃ ಮ್ಯೂಚುವಲ್ ಫಂಡ್ ಆಧಾರಿತವಾಗಿರಬೇಕು. ಈ ಹೂಡಿಕೆಯಲ್ಲಿ ಠೇವಣಿಗಿಂತಲೂ ಹೆಚ್ಚಿನ ವರಮಾನ ಬಂದರೂ ಬರಬಹುದು ಹಾಗೂ ಏನು ಬಾರದೇನೂ ಇರಬಹುದು. ತೆರಿಗೆ ಉಳಿಸಲು ಭದ್ರತೆ ಕಡೆಗಣಿಸುವುದು ಜಾಣತನವಲ್ಲ. ಎಸ್.ಬಿ.ಐ. ನವರ Re Investment Deposit ಯೋಜನೆಯಲ್ಲಿ₹ 5 ಲಕ್ಷ ತೊಡಗಿಸಿರಿ. ಹಣದ ಭದ್ರತೆ , ಅವಧಿಗೆ ಮುನ್ನ ಬೇಕಾದರೂ ಹಣ ಪಡೆಯುವ ಸೌಲತ್ತು ಹಾಗೂ ನಿಖರವಾದ ಬಡ್ಡಿ ಆದಾಯ ಈ ಮೂರೂ ಸಹ ಈ ಠೇವಣಿಯಲ್ಲಿದೆ. ನಿಮ್ಮ ವಾರ್ಷಿಕ ಸಂಬಳ, ಠೇವಣಿ ಮೇಲಿನ ಬಡ್ಡಿ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ಪರಿಗಣಿಸುವಾಗ ನಿಮಗೆ ಆದಾಯ ತೆರಿಗೆ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.