ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 28 ಮೇ 2019, 19:30 IST
Last Updated 28 ಮೇ 2019, 19:30 IST
ಯು. ಪಿ ಪುರಾಣಿಕ್‌
ಯು. ಪಿ ಪುರಾಣಿಕ್‌   

ಮಹೇಶ, ಬೆಂಗಳೂರು

ನಾನು ಷೇರುಪೇಟೆಯಲ್ಲಿ ಹಣ ಹೂಡಿದ್ದೇನೆ. ಲಾಭ ನಷ್ಟ ಎರಡೂ ಆಗಿದೆ. ಲಾಭ ಬಂದಾಗ ಬ್ರೋಕರ್ಸ್ ಅದು ಇದು ಅಂತ ಖರ್ಚು ಹಾಕುತ್ತಾರೆ. ಒಂದು ವೇಳೆ ನಮಗೆ ₹ 2 ಲಕ್ಷ ಲಾಭ ಬಂದರೆ ಪ್ರತ್ಯೇಕ ತೆರಿಗೆ ಕೊಡಬೇಕಾ ತಿಳಿಸಿರಿ.

ಉತ್ತರ: ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಲಾಭ ಬಂಡವಾಳ ಗಳಿಕೆ (Capital Gain) ಎನ್ನುತ್ತಾರೆ. ದೀರ್ಘಾವಧಿ ಬಂಡವಾಳಗಳಿಗೆ (ಒಂದು ವರ್ಷಕ್ಕೂ ಮೇಲಿನ) ಮೇಲಿನ ತೆರಿಗೆ ಒಳಗೊಂಡು 2018–19ನೇ ಸಾಲಿನ ಬಜೆಟ್ಟಿನಲ್ಲಿ ಬರುವ ಲಾಭವು₹ 1 ಲಕ್ಷಕ್ಕೂ ಹೆಚ್ಚಿಗೆ ಇದ್ದರೆ ಅದಕ್ಕೆ ಶೇ. 10 ರಷ್ಟು ತೆರಿಗೆ ಪಾವತಿಸಬೇಕು. ಸದ್ಯ ಒಂದು ವರ್ಷದೊಳಗೆ ಮಾರಾಟವಾದಲ್ಲಿ ಶೇ 15 ರಷ್ಟು ತೆರಿಗೆ ಬರುತ್ತದೆ. ನೀವು ಲಾಭ ನಷ್ಟ ಎರಡೂ ಅನುಭವಿಸಿರುವುದರಿಂದಲೂ, ನಿಮಗೆ ಬೇರೆ ಆದಾಯವಿರುವ ಸಾಧ್ಯತೆ ಇರುವುದರಿಂದಲೂ ನೀವು 31–7–2019ರೊಳಗೆ ಆಡಿಟರ್ ಮುಖಾಂತರ ಚರ್ಚಿಸಿ ರಿಟರ್ನ್ ಸಲ್ಲಿಸಿರಿ.

ADVERTISEMENT

ಸವಿತಾ ಟಿ. ಶಿವಮೊಗ್ಗ

ವಯಸ್ಸು 29. ಅವಿವಾಹಿತೆ. ಸರ್ಕಾರಿ ಗುತ್ತಿಗೆ ಆಧಾರದ ಮೇಲೆ ಕೆಲಸ. ಸಂಬಳ ₹ 25 ಸಾವಿರ. ತಿಂಗಳ ಖರ್ಚು ₹ 8 ರಿಂದ ₹ 10 ಸಾವಿರ. ನಿಮ್ಮ ಅಂಕಣದಿಂದ ಪ್ರಭಾವಿತಳಾಗಿ ₹ 3 ಸಾವಿರ ಆರ್‌.ಡಿ ಮಾಡಿದ್ದೇನೆ. ಪಿಎಲ್‌ಐ ₹ 1,300 ಜೀವನ್ ಆನಂದ್‌ –ಪಿಎಲ್‌ಐ ಭವಿಷ್ಯಕ್ಕೆ ಉತ್ತಮವೇ? ನನ್ನ ಹಿತೈಷಿಗಳು ಎಲ್‌ಐಸಿ 12 ವರ್ಷದ ವಾರ್ಷಿಕ ₹24 ಸಾವಿರ ತುಂಬುವ ಯೋಜನೆ ತಿಳಿಸಿದ್ದಾರೆ. ಸಲಹೆ ನೀಡಿ.

ಉತ್ತರ: ನಿಮ್ಮ ಉಳಿತಾಯ ಖರ್ಚು ಪರಿಗಣಿಸಿದರೆ, ಗರಿಷ್ಠ ₹ 9 ಸಾವಿರ ತಿಂಗಳಿಗೆ ಉಳಿಸಬಹುದು. ಓರ್ವ ವ್ಯಕ್ತಿ ತನ್ನ ಒಟ್ಟು ಆದಾಯದ ಶೇ 15ಕ್ಕೂ ಹೆಚ್ಚಿನ ವಿಮೆ ಮಾಡುವುದು ಜಾಣತನವಲ್ಲ. ಈ ಮಿತಿ ನೆನಪಿಟ್ಟುಕೊಳ್ಳಿ. ನಿಮ್ಮ ಮದುವೆ ತನಕ ಕನಿಷ್ಠ ₹ 5 ಸಾವಿರ ಒಂದು ವರ್ಷಗಳ ಅವಧಿಯವರೆಗೆ ಆರ್‌.ಡಿ ಮಾಡಿರಿ. ಇದರಿಂದ ಮುಂದಿನ ಜೀವನ ಸುಖಮಯವಾಗುತ್ತದೆ.

ಹೆಸರು, ಊರು ಬೇಡ

ನಾನು ನಿವೇಶನ ಮಾರಾಟ ಮಾಡಿ ಬಂದ ಹಣ ₹ 11 ಲಕ್ಷ capital gain ಖಾತೆಯಲ್ಲಿ ಬ್ಯಾಂಕ್‌ನಲ್ಲಿ ಇರಿಸಿದ್ದೆ. ಅದು ಪೂರ್ಣಗೊಂಡು ₹ 13,64,000 ಆಗಿದೆ. ಎಸ್‌ಬಿಐಗೆ ಹೋಗಿ ಕೇಳಿದರೆ ಹಣ ಕೊಡಲು ಬರುವುದಿಲ್ಲ. ಈ ಹಣ ಮತ್ತೊಂದು ಮನೆ ಕೊಳ್ಳಲು ಮಾತ್ರ ಕೊಡಬಹುದು ಎನ್ನುತ್ತಿದ್ದಾರೆ. ₹ 13.64 ಲಕ್ಷಕ್ಕೆ ಮನೆ ಹೇಗೆ ಕೊಂಡುಕೊಳ್ಳಲಿ? ದಯಮಾಡಿ ಮಾರ್ಗದರ್ಶನ ಮಾಡಿರಿ.

ಉತ್ತರ: ಬ್ಯಾಂಕಿನವರು ಹೇಳಿರುವುದು ಸರಿ ಇರುತ್ತದೆ. ನಿವೇಶನ ಮಾರಾಟ ಮಾಡಿದ ತಕ್ಷಣ Capital gain Tax ತುಂಬಬೇಕಾಗಿತ್ತು ಅಥವಾ ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ–ರೂರಲ್‌ ಎಲೆಕ್ಟ್ರಿಫಿಕೇಷನ್‌ ಬಾಂಡುಗಳಲ್ಲಿ ಹಣ ತೊಡಗಿಸಬೇಕಿತ್ತು. ನೀವು ತಕ್ಷಣ ಚಾರ್ಟರ್ಡ್‌ ಅಕೌಂಟಂಟ್‌ ಸಂಪರ್ಕಿಸಿ ವಿಷಯ ತಿಳಿಸಿ. ಬರುವ ತೆರಿಗೆ–ದಂಡ ತುಂಬಿ ಉಳಿದ ಹಣ ಪಡೆಯಿರಿ.

ತಿದ್ದುಪಡಿ: 22–5–2019ರ ಸಂಚಿಕೆಯಲ್ಲಿನ ಧಾರವಾಡದ ಜೋಶಿ ಅವರ ಪ್ರಶ್ನೆಗೆ ಸಂಬಂಧಿಸಿದ ಉತ್ತರದ ಕೊನೆಯ ಭಾಗದಲ್ಲಿ .. ಸಂಬಳ ಹಾಗೂ ಪಿಂಚಣಿದಾರರು ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 40 ಸಾವಿರ (1–4–2019ರಿಂದ ₹ 50 ಸಾವಿರ) ವಿನಾಯ್ತಿ ಪಡೆಯಬಹುದು. ಒಟ್ಟಿನಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. 31–7–2019ರ ಒಳಗೆ ರಿಟರ್ನ್‌ ಸಲ್ಲಿಸುವ ಅಗತ್ಯವೂ ಇಲ್ಲ ಎಂದು ಓದಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.