ADVERTISEMENT

ರಾಯಚೂರು ‘ಎಪಿಎಂಸಿ’ಗೆ ಮರಳಿದ ಜೀವಕಳೆ

ನಾಗರಾಜ ಚಿನಗುಂಡಿ
Published 24 ಡಿಸೆಂಬರ್ 2019, 19:30 IST
Last Updated 24 ಡಿಸೆಂಬರ್ 2019, 19:30 IST
ಎಪಿಎಂಸಿ ಆವರಣದಲ್ಲಿ ಚುರುಕುಗೊಂಡಿರುವ ವಹಿವಾಟು
ಎಪಿಎಂಸಿ ಆವರಣದಲ್ಲಿ ಚುರುಕುಗೊಂಡಿರುವ ವಹಿವಾಟು   

ರಾಜ್ಯದ ಅತ್ಯಂತ ಹಳೆಯ (1934) ಎಪಿಎಂಸಿ ಹೆಗ್ಗಳಿಕೆಯ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮೂರು ವರ್ಷಗಳ ನಂತರ ಜೀವಕಳೆ ಮರಳಿದ್ದು, ಈರುಳ್ಳಿ, ಭತ್ತ, ಹತ್ತಿ, ಶೇಂಗಾ, ಸೂರ್ಯಕಾಂತಿ ಉತ್ಪನ್ನಗಳ ವಹಿವಾಟು ಭರಾಟೆಯಿಂದ ನಡೆಯುತ್ತಿದೆ.

ಸತತ ಮೂರು ವರ್ಷಗಳ ಬರಗಾಲದಿಂದ ಬಣಗುಡುತ್ತಿದ್ದ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಈ ವರ್ಷ ಜೀವಕಳೆ ಬಂದಿದೆ. ಈರುಳ್ಳಿ, ಭತ್ತ, ಹತ್ತಿ, ಶೇಂಗಾ, ಸೂರ್ಯಕಾಂತಿ ಉತ್ಪನ್ನಗಳನ್ನು ರೈತರು ಮಾರಾಟಕ್ಕೆ ತೆಗೆದುಕೊಂಡು ಬರುತ್ತಿದ್ದಾರೆ. ಎಲ್ಲಿ ನೋಡಿದರೂ ಕೃಷಿ ಉತ್ಪನ್ನಗಳನ್ನು ಹೊತ್ತ ಲಾರಿಗಳು, ಜೀಪ್‌ಗಳು ಹಾಗೂ ಟ್ರ್ಯಾಕ್ಟರ್‌ಗಳ ಸಾಲು ಕಂಡುಬರುತ್ತಿದೆ. ಈ ವರ್ಷ ನಷ್ಟದ ಸುಳಿಯಿಂದ ಪಾರಾದ ಖುಷಿಯಲ್ಲಿ ರೈತರಿದ್ದಾರೆ. ಮಾರುಕಟ್ಟೆ ತುಂಬ ಬಹುತೇಕ ಭತ್ತ ಹಾಗೂ ಹತ್ತಿ ಉತ್ಪನ್ನಗಳು ಆವರಿಸಿಕೊಂಡಿವೆ. ಆದರೆ, ಈರುಳ್ಳಿ ಬೆಳೆದಿರುವ ರೈತರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಮೂರು ತಿಂಗಳಲ್ಲೆ ಕೊಯ್ಲು ಕಂಡಿರುವ ಈರುಳ್ಳಿ ಉತ್ಪನ್ನವು, ಆರು ತಿಂಗಳು ಕಳೆದು ಮಾರುಕಟ್ಟೆಗೆ ಬಂದಿರುವ ಭತ್ತ ಮತ್ತು ಹತ್ತಿಗಿಂತ ದುಬಾರಿ ಬೆಲೆಗೆ ಮಾರಾಟ ಆಗುತ್ತಿದೆ.

ಕೊಳವೆಬಾವಿ, ಕಾಲುವೆ, ಕೆರೆ ನಿರ್ಮಿಸಿಕೊಂಡು ನೀರಾವರಿ ಕೃಷಿ ಮಾಡುತ್ತಿರುವ ಸಿಂಧನೂರು, ದೇವದುರ್ಗ ಹಾಗೂ ಮಾನ್ವಿ ಭಾಗದ ರೈತರು ಈರುಳ್ಳಿ ಬೆಳೆದಿದ್ದಾರೆ. ಎರಡು ಎಕರೆಗಿಂತ ಹೆಚ್ಚು ಈರುಳ್ಳಿ ಬೆಳೆದಿರುವ ದೊಡ್ಡ ರೈತರು ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈರುಳ್ಳಿ ಬೆಳೆದ ರೈತರ ಮುಖದಲ್ಲಿ ಲಕ್ಷ್ಮೀ ನಗೆ ತುಂಬಿದೆ.

ADVERTISEMENT

ಭತ್ತ ಬೆಳೆದಿರುವ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ಕೈಸೇರುತ್ತಿಲ್ಲ ಎನ್ನುವ ಕೊರಗು ಇದೆ. ಅಕ್ಟೋಬರ್‌ನಲ್ಲಿ ಸುರಿದ ಅತಿವೃಷ್ಟಿಯಿಂದ ಹತ್ತಿ ಬೆಳೆ ಕೂಡಾ ಸಂಪೂರ್ಣ ಕೈಬಿಟ್ಟು ಹೋಗುವ ಆತಂಕದಲ್ಲಿ ರೈತರಿದ್ದರು. ಆದರೆ, ಹತ್ತಿ ಮತ್ತೆ ತಲೆಎತ್ತಿದ್ದು, ರೈತರಿಗೆ ಆಸರೆಯಾಗಿದೆ. ಹಿಂದಿನ ಬರಗಾಲಕ್ಕೆ ಹೋಲಿಸಿದರೆ ಈ ವರ್ಷ ಪರಿಸ್ಥಿತಿ ಸುಧಾರಿಸಿದೆ.

ರಾಯಚೂರು ಅಕ್ಕಪಕ್ಕದ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಗ್ರಾಮೀಣ ಭಾಗಗಳಿಂದಲೂ ರೈತರು ತಾವು ಬೆಳೆದಿರುವ ಉತ್ಪನ್ನಗಳನ್ನು ತುಂಬಿಕೊಂಡು ಎಪಿಎಂಸಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಹತ್ತಿ ಹರಾಜು ಪ್ರಕ್ರಿಯೆ ಬೆಳಗಿನ ಜಾವದಲ್ಲೇ ಆರಂಭವಾಗುತ್ತದೆ. ಗ್ರಾಮೀಣ ಭಾಗಗಳಿಂದ ನೂರಾರು ವಾಹನಗಳು ಕೃಷಿ ಉತ್ಪನ್ನಗಳನ್ನು ಹೊತ್ತು ಬರುತ್ತಿರುವುದು ಗಮನ ಸೆಳೆಯುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಲಾರಂಭಿಸಿದೆ.

ಭತ್ತ, ಈರುಳ್ಳಿ ಸೇರಿದಂತೆ ಇತರೆ ಉತ್ಪನ್ನಗಳ ಹರಾಜು ನಡೆಸಲು ನಗರ ಮಧ್ಯಭಾಗದಲ್ಲಿ ಎಪಿಎಂಸಿ ಮಾರುಕಟ್ಟೆ ಇದೆ. ಹತ್ತಿ ಹರಾಜು ಪ್ರಕ್ರಿಯೆಗಾಗಿ ಹೈದರಾಬಾದ್‌ ಮಾರ್ಗದಲ್ಲಿ ಪ್ರತ್ಯೇಕವಾದ ಮಾರುಕಟ್ಟೆ ಎಪಿಎಂಸಿಯಿಂದ ನಿರ್ಮಿಸಲಾಗಿದೆ. ಸಿಂಧನೂರು, ಮಾನ್ವಿ, ಲಿಂಗಸುಗೂರು, ದೇವದುರ್ಗ ತಾಲ್ಲೂಕುಗಳಲ್ಲಿಯೂ ಎಪಿಎಂಸಿ ಇದ್ದರೂ ಅಲ್ಲಿ ಹತ್ತಿ ವಹಿವಾಟು ಹೆಚ್ಚು ನಡೆಯುವುದಿಲ್ಲ.

ರಾಯಚೂರಿನಲ್ಲಿ ಹತ್ತಿ ಜಿನ್ನಿಂಗ್‌ ಹಾಗೂ ಕಂಪ್ರೆಸರ್‌ ಫ್ಯಾಕ್ಟರಿಗಳಿವೆ. ರೈತರಿಂದ ಹತ್ತಿ ಖರೀದಿಸಿ ಜಿನ್ನಿಂಗ್‌ ಮಾಡಲಾಗುತ್ತದೆ. ಸಂಸ್ಕರಣೆಗೊಂಡ ಹತ್ತಿಯು ಬಹುತೇಕ ತಮಿಳುನಾಡು ರಾಜ್ಯಕ್ಕೆ ರವಾನೆಯಾಗುತ್ತಿದೆ.

ಕೃಷಿ ಉತ್ಪನ್ನಗಳ ಮಾರಾಟ ವಹಿವಾಟು ಚುರುಕುಗೊಂಡಿದ್ದರೂ ಬ್ಯಾಂಕುಗಳಲ್ಲಿ ಬೆಟ್ಟದಂತೆ ಬೆಳೆದಿರುವ ಸಾಲದ ಬಾಧೆಯಿಂದ ರೈತಾಪಿ ವರ್ಗ ಇನ್ನೂ ದೂರವಾಗಿಲ್ಲ.

‘ಮಳೆ ಚೆನ್ನಾಗಿ ಸುರಿದು, ಬೆಳೆಗಳು ಚೆನ್ನಾಗಿದ್ದರೆ ಸಾಲ ತೀರಿಸುವುದಕ್ಕೆ ಸರ್ಕಾರದ ಮುಂದೆ ಯಾವ ರೈತರೂ ಕೈ ಚಾಚುವುದಿಲ್ಲ. ಈ ವರ್ಷ ಸ್ವಲ್ಪ ಬೆಳೆ ಕೈಗೆ ಬಂದಿದೆ. ಇದರಿಂದ ರೈತರು ಬದುಕುವುದಕ್ಕೆ ದಾರಿಯಾಗಿದೆ. ಒಳ್ಳೆಯ ಮಳೆ ಇದೇ ರೀತಿಯಿದ್ದರೆ ಬ್ಯಾಂಕ್‌ ಸಾಲವನ್ನೇ ರೈತರು ಮಾಡುವುದಿಲ್ಲ. ಸರ್ಕಾರವು ಹೇಳಿರುವಂತೆ ಬಾಕಿ ಸಾಲವನ್ನೆಲ್ಲ ಕೊಟ್ಟರೆ ಸಾಕು. ಎಲ್ಲವೂ ಮಳೆಯನ್ನು ಅವಲಂಬಿಸಿದೆ’ ಎನ್ನುತ್ತಾರೆ ಕಡಗಂದೊಡ್ಡಿ ರೈತ ಲಕ್ಷ್ಮಣಗೌಡ ಅವರು.

₹20 ಕೋಟಿ ಸಂಗ್ರಹ

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಈ ವರ್ಷ ₹20 ಕೋಟಿ ಶುಲ್ಕ ಸಂಗ್ರಹದ ಗುರಿ ಹೊಂದಿದೆ. ಬೆಂಗಳೂರು, ಮೈಸೂರು ನಂತರದಲ್ಲಿ ರಾಯಚೂರು ಮಾರುಕಟ್ಟೆಯಲ್ಲಿ ಅತಿಹೆಚ್ಚು ಶುಲ್ಕ ಸಂಗ್ರಹವಾಗುತ್ತದೆ. ಹುಬ್ಬಳ್ಳಿ ಎಪಿಎಂಸಿಗಿಂತಲೂ ಇದು ಹಳೆಯದ್ದಾಗಿದೆ. 1934 ರಲ್ಲಿ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.