ADVERTISEMENT

ಚೀನಾಕ್ಕೆ ಕಚ್ಚಾ ಸಕ್ಕರೆ ರಫ್ತು

ಪಿಟಿಐ
Published 8 ನವೆಂಬರ್ 2018, 20:17 IST
Last Updated 8 ನವೆಂಬರ್ 2018, 20:17 IST
   

ನವದೆಹಲಿ: ಮುಂದಿನ ವರ್ಷದಿಂದ ಭಾರತವು ಚೀನಾಕ್ಕೆ ಕಚ್ಚಾ ಸಕ್ಕರೆ ರಫ್ತು ಆರಂಭಿಸಲಿದೆ.

20 ಲಕ್ಷ ಟನ್‌ಗಳಷ್ಟು ಕಚ್ಚಾ ಸಕ್ಕರೆ ರಫ್ತು ಮಾಡಲು ಉದ್ದೇಶಿಸಲಾಗಿದೆ. ಮೊದಲ ಕಂತಿನಲ್ಲಿ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘವು, 15 ಸಾವಿರ ಟನ್‌ ರಫ್ತು ಮಾಡಲು ಚೀನಾ ಸರ್ಕಾರಿ ಒಡೆತನದ ‘ಸಿಒಎಫ್‌ಸಿಒ’ ಜತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಚೀನಾ ಜತೆಗಿನ ಭಾರತದ ವ್ಯಾಪಾರ ಕೊರತೆ ಪ್ರಮಾಣ ತಗ್ಗಿಸಲು ಸಾಧ್ಯವಾಗಲಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಭಾರತವು 2017–18ರಲ್ಲಿ ₹ 2.37 ಲಕ್ಷ ಕೋಟಿ ಮೊತ್ತದ ಸರಕು ರಫ್ತು ಮಾಡಿತ್ತು. ₹ 5.47 ಲಕ್ಷ ಕೋಟಿ ಮೊತ್ತದ ಸರಕುಗಳನ್ನು ಆಮದು ಮಾಡಿಕೊಂಡಿತ್ತು.

ಬಾಸ್ಮತಿಯೇತರ ಅಕ್ಕಿ ನಂತರ ಚೀನಾ, ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಎರಡನೇ ಸರಕು ಕಚ್ಚಾ ಸಕ್ಕರೆಯಾಗಿದೆ.

ADVERTISEMENT

ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುವ ದೇಶವಾಗಿದೆ. 2018ರಲ್ಲಿ 3.20 ಕೋಟಿ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗಿದೆ. ಭಾರತದಲ್ಲಿ ಮೂರೂ ಬಗೆಯ ಸಕ್ಕರೆಗಳಾದ ಕಚ್ಚಾ, ಶುದ್ಧೀಕರಿಸಿದ ಮತ್ತು ಬಿಳಿ ಸಕ್ಕರೆ ತಯಾರಿಸಲಾಗುತ್ತಿದೆ. ಕಬ್ಬು ಕತ್ತರಿಸಿದ ನಂತರ ಕಡಿಮೆ ಸಮಯದಲ್ಲಿ ನುರಿಸಲಾಗುವುದರಿಂದ ಭಾರತದ ಸಕ್ಕರೆ ಗರಿಷ್ಠ ಗುಣಮಟ್ಟ ಹೊಂದಿದೆ.

ಭಾರತವು ಉತ್ತಮ ಗುಣಮಟ್ಟದ ಸಕ್ಕರೆಯನ್ನು ಗರಿಷ್ಠ ಪ್ರಮಾಣದಲ್ಲಿ ನಿಯಮಿತವಾಗಿ ಚೀನಾಕ್ಕೆ ಪೂರೈಕೆ ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.