ADVERTISEMENT

ಆರ್ಥಿಕತೆ ಕುಸಿಯದಂತೆ ತಡೆಯಲು ಇನ್ನಷ್ಟು ಕ್ರಮಗಳನ್ನು ಘೋಷಿಸಿದ ರಿಸರ್ವ್ ಬ್ಯಾಂಕ್

ಪಿಟಿಐ
Published 1 ಏಪ್ರಿಲ್ 2020, 10:34 IST
Last Updated 1 ಏಪ್ರಿಲ್ 2020, 10:34 IST
   

ಮುಂಬೈ: ಕೋವಿಡ್-19 ಭೀತಿಯಿಂದ ಕುಸಿಯುತ್ತಿರುವ ಆರ್ಥಿಕತೆಗೆ ಆಸರೆ ಒದಗಿಸಲು ಭಾರತೀಯರಿಸರ್ವ್‌ ಬ್ಯಾಂಕ್ ಬುಧವಾರ ಹಲವು ಕ್ರಮಗಳನ್ನು ಪ್ರಕಟಿಸಿದೆ.

ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ವಿದೇಶಿ ಗ್ರಾಹಕರಿಗೆ ಸರಬರಾಜು ಮಾಡಿದ ಉತ್ಪನ್ನಗಳಿಗೆ ಹಣ ಪಡೆದುಕೊಳ್ಳಲು ಇದ್ದ ಸಮಯದ ಮಿತಿಯನ್ನು 9 ತಿಂಗಳಿನಿಂದ 15 ತಿಂಗಳಿಗೆವಿಸ್ತರಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಂಗಡ ಸ್ವೀಕಾರ ಮಿತಿಯನ್ನೂ (ವೇಸ್ ಅಂಡ್ ಮೀನ್ಸ್‌ ಅಡ್ವಾನ್ಸ್)ಆರ್‌ಬಿಐ ಶೇ 30ರಷ್ಟು ಹೆಚ್ಚಿಸಿದೆ. ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಸೆಪ್ಟೆಂಬರ್ 30ರವರೆಗೂ ಜಾರಿಯಲ್ಲಿರುತ್ತದೆ.

ADVERTISEMENT

ಅನೂಹ್ಯ ಸಂದರ್ಭಗಳಲ್ಲಿ ಉಂಟಾಗಬಹುದಾದ ನಷ್ಟಗಳನ್ನು ತುಂಬಿಕೊಳ್ಳಲು ಬ್ಯಾಂಕ್‌ಗಳು ಮೀಸಲಿಡುವ ಬಂಡವಾಳ ನಿಧಿ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಕೋವಿಡ್-19 ಪಿಡುಗಿನಿನಿಂದ ವಿಶ್ವದ ಹಲವು ದೇಶಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜುಲೈ 31ರವರೆಗೆ ರಫ್ತು ಮಾಡಿದ ಉತ್ಪನ್ನಗಳಹಣ ಸ್ವೀಕಾರಕ್ಕೆಸಮಯದ ಮಿತಿಯನ್ನು 15 ತಿಂಗಳಿಗೆ ವಿಸ್ತರಿಸಲಾಗಿದೆ.ಇದರಿಂದ ರಫ್ತುದಾರರು ಪಾವತಿ ಒಪ್ಪಂದಗಳನ್ನು ಹೊಸ ರೀತಿಯಲ್ಲಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಆಗಿದೆ ಎಂದು ಆರ್‌ಬಿಐ ಹೇಳಿದೆ.

ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯಲು ನಿರ್ಬಂಧ ವಿಧಿಸಿರುವ ಕಾರಣ, ರಾಜ್ಯ ಸರ್ಕಾರಗಳ ಆದಾಯದಲ್ಲಿ ಕೊರತೆಯಾಗಬಹುದು. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ನೀಡುವ ಮುಂಗಡಗಳ ಪ್ರಮಾಣವನ್ನು ಶೇ 30ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದೂ ಸಹ ಆರ್ಥಿಕತೆಯ ಚೇತರಿಕೆಗೆ ಪೂರಕ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.