ಮುಂಬೈ: ಇಂಡಸ್‌ಇಂಡ್ ಬ್ಯಾಂಕ್‌ನ ಲೆಕ್ಕಪತ್ರದಲ್ಲಿ ಕಂಡುಬಂದಿರುವ ₹2,100 ಕೋಟಿ ವ್ಯತ್ಯಾಸಕ್ಕೆ ಪರಿಹಾರ ಕಂಡುಕೊಳ್ಳಲು ಈ ತ್ರೈಮಾಸಿಕದ ಅಂತ್ಯದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ.
ಬ್ಯಾಂಕ್‌ನ ನಿವ್ವಳ ಮೌಲ್ಯದಲ್ಲಿ ಶೇ 2.35ರಷ್ಟು ವ್ಯತ್ಯಾಸ ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿತ್ತು. ಇದು ಪತ್ತೆಯಾಗುತ್ತಲೇ ಬ್ಯಾಂಕ್‌ನ ಲೆಕ್ಕದಲ್ಲಿ ಕೆಲವೊಂದು ಮೊತ್ತದ ತಿದ್ದುಪಡಿಯೂ ಕಂಡುಬಂತು ಎಂದು ವರದಿಯಾಗಿದೆ. ಇದನ್ನು ಪತ್ತೆ ಮಾಡುವ ಸಲುವಾಗಿ ಬಾಹ್ಯ ಲೆಕ್ಕಪರಿಶೋಧಕರನ್ನು ಬ್ಯಾಂಕ್ ನೇಮಿಸಿದ್ದು, ವಾಸ್ತವದಲ್ಲಿ ಆಗಿರುವ ವ್ಯತ್ಯಾಸದ ವರದಿ ನೀಡಲಿದ್ದಾರೆ ಎಂದು ಆರ್‌ಬಿಐ ಹೇಳಿದೆ.
‘ಆಗಿರುವ ತಪ್ಪಿಗೆ ಪ್ರಸಕ್ತ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದ ಅಂತ್ಯದೊಳಗಾಗಿ ಪರಿಹಾರ ಪ್ರಕ್ರಿಯೆ ಆರಂಭಿಸಬೇಕು. ಜತೆಗೆ ತನ್ನ ಪಾಲುದಾರರಿಗೆ ಈ ಮಾಹಿತಿಯನ್ನು ನೀಡಬೇಕು. ಆದರೆ ಈ ಹಂತದಲ್ಲಿ ಠೇವಣಿದಾರರು ಊಹಾಪೋಹ ಸುದ್ದಿಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಬ್ಯಾಂಕ್‌ನ ಆಡಳಿತ ಮಂಡಳಿಗೆ ಆರ್‌ಬಿಐ ನಿರ್ದೇಶಿಸಿದೆ.
‘ಬ್ಯಾಂಕ್‌ನ ಹಣಕಾಸಿನ ಪರಿಸ್ಥಿತಿ ಎಂದಿನಂತೆಯೇ ಇದೆ. ಹೀಗಾಗಿ ಗ್ರಾಹಕರು ಮತ್ತು ಹೂಡಿಕೆದಾರರು ಆತಂಕಪಡುವ ಅಗತ್ಯವಿಲ್ಲ. ಆದರೆ ಬ್ಯಾಂಕ್‌ನ ಬೆಳವಣಿಗೆ ಕುರಿತು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ’ ಎಂದಿದ್ದಾರೆ.
ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಅವಧಿಯಲ್ಲಿ ಈ ಲೆಕ್ಕ ವ್ಯತ್ಯಾಸವಾಗಿದೆ. ಆದರೆ ಮಾರ್ಚ್ ಮೊದಲ ವಾರದಲ್ಲಿ ಆರ್‌ಬಿಐಗೆ ಬ್ಯಾಂಕ್ ಮಾಹಿತಿ ನೀಡಿದೆ. ಹೊರಗಿನ ಲೆಕ್ಕಪರಿಶೋಧಕರು ನೀಡುವ ವರದಿಯನ್ನು ಆಧರಿಸಿ ಅಂತಿಮವಾಗಿ ಆಗಿರುವ ವ್ಯತ್ಯಾಸದ ಮಾಹಿತಿ ನೀಡಲಾಗುವುದು. ಈ ವರದಿಯು ಏಪ್ರಿಲ್‌ನಲ್ಲಿ ಕೈಸೇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.