ADVERTISEMENT

ಒಡವೆ ಸಾಲಕ್ಕೆ ಬಿಗಿ ನಿಯಮ: ಬ್ಯಾಂಕ್‌, ಎನ್‌ಬಿಎಫ್‌ಸಿಗೆ ಆರ್‌ಬಿಐ ಲಗಾಮು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 22:53 IST
Last Updated 10 ಏಪ್ರಿಲ್ 2025, 22:53 IST
   

ಮುಂಬೈ: ಬ್ಯಾಂಕ್‌ ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೀಡುವ ಚಿನ್ನದ ಮೇಲಿನ ಸಾಲಕ್ಕೆ ಸಂಬಂಧಿಸಿದಂತೆ ಬಿಗಿ ನಿಯಮ ರೂಪಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮುಂದಾಗಿದ್ದು, ಈ ಸಂಬಂಧ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. 

ಗ್ರಾಹಕರು ಆಪತ್ಕಾಲದಲ್ಲಿ ಮನೆಯಲ್ಲಿರುವ ಚಿನ್ನದ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯುವುದು ವಾಡಿಕೆ. ಈ ವೇಳೆ ಬ್ಯಾಂಕ್‌ಗಳು ಮತ್ತು ಕಂಪನಿಗಳು ಪಾಲಿಸುವ ಕಠಿಣ ನಿಯಮಗಳಿಂದ ಸಾಲಗಾರರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಸಾಲಗಾರರ ಹಿತರಕ್ಷಣೆ ದೃಷ್ಟಿಯಿಂದ ಸ್ಪಷ್ಟ ನಿಯಮಾವಳಿ ರೂಪಿಸಲು ಆರ್‌ಬಿಐ ನಿರ್ಧರಿಸಿದೆ.  

ಸಾಲದಾತರು ಗ್ರಾಹಕರಿಗೆ ಸಾಲ ನೀಡುವುದಕ್ಕೂ ಮೊದಲು ಚಿನ್ನದ ಶುದ್ಧತೆ, ಅದರ ತೂಕ (ಒಟ್ಟು ಮತ್ತು ನಿವ್ವಳ) ಇತ್ಯಾದಿ ಪರೀಕ್ಷಿಸಲು ಪ್ರಮಾಣೀಕೃತ ಕಾರ್ಯ ವಿಧಾನ ಅನುಸರಿಸಬೇಕಿದೆ. ತಮಗೆ ಸೇರಿದ ಎಲ್ಲಾ ಶಾಖೆಗಳಲ್ಲಿ ಏಕರೂಪದ ಕಾರ್ಯ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಕರಡು ನಿಯಮಾವಳಿಯಲ್ಲಿ ಪ್ರಸ್ತಾಪಿಸಲಾಗಿದೆ.

ADVERTISEMENT
ಚಿನ್ನದ ಮೇಲಿನ ಸಾಲದ ನಿಯಮಗಳನ್ನು ಬಿಗಿಗೊಳಿಸುತ್ತಿಲ್ಲ. ಅವುಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. ಎನ್‌ಬಿಎಫ್‌ಸಿಗೆ ಇದ್ದ ನಿಯಮಗಳು ಇನ್ನು ಮುಂದೆ ಬ್ಯಾಂಕ್‌ಗಳಿಗೂ ಅನ್ವಯಿಸಲಿವೆ.
ಸಂಜಯ್‌ ಮಲ್ಹೋತ್ರಾ, ಆರ್‌ಬಿಐ ಗವರ್ನರ್‌

ಈ ಬಗ್ಗೆ ತಮ್ಮ ವೆಬ್‌ಸೈಟ್‌ಗಳಲ್ಲಿ ಸಾಲಗಾರರಿಗೆ ಅರ್ಥವಾಗುವಂತೆ ಪ್ರಕಟಿಸಬೇಕಿದೆ ಎಂದು ಹೇಳಿದೆ.

ಚಿನ್ನ ಒತ್ತೆಯಿಟ್ಟುಕೊಂಡು ಸಾಲ ನೀಡುವ ವೇಳೆ ಸಾಲಗಾರರ ಸಮ್ಮುಖದಲ್ಲಿಯೇ ಚಿನ್ನದ ಪರೀಕ್ಷೆ ನಡೆಸಬೇಕು. ಹರಳಿನ ತೂಕ ಇತ್ಯಾದಿ ಕೈಬಿಡುವುದನ್ನು ಅವರ ಎದುರಿನಲ್ಲಿಯೇ ಮಾಡಬೇಕು. ಈ ಬಗ್ಗೆ ಅವರಿಗೆ ವಿವರಿಸಿ ಹೇಳಬೇಕಿದೆ ಎಂದು ಹೇಳಿದೆ.

‘ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರ ಕಡಿತಗೊಳಿಸಿದೆ. ಇದು ವ್ಯಾಪಾರ ವಹಿವಾಟಿನ ಬಲವರ್ಧನೆಗೆ ನೆರವಾಗಲಿದೆ. ಪ್ರಸ್ತುತ ಹಳದಿ ಲೋಹದ ಬೆಲೆಯು ಸಾರ್ವಕಾಲಿಕ ಗರಿ‌ಷ್ಠ ಮಟ್ಟಕ್ಕೆ ಮುಟ್ಟಿದೆ. ಹಾಗಾಗಿ, ಚಿನ್ನದ ಮೇಲೆ ಸಾಲ ಪಡೆಯುವ ಪ್ರಮಾಣವು ಏರಿಕೆಯಾಗಲಿದೆ’ ಎಂದು ಇಂಡೆಲ್‌ ಮನಿ ಸಿಇಒ ಉಮೇಶ್‌ ಮೋಹನನ್‌ ಹೇಳಿದ್ದಾರೆ.

ಸ್ಥಳೀಯ ಭಾಷೆಯಲ್ಲಿ ಒಪ್ಪಂದ

ಚಿನ್ನದ ಸಾಲ ನೀಡುವಾಗ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳು ಸಾಲಗಾರರಿಂದ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತವೆ. ಈ ಪತ್ರವು ಸ್ಥಳೀಯ ಭಾಷೆ ಅಥವಾ ಸಾಲಗಾರರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಇರಬೇಕಿದೆ ಎಂದು ಕರಡು ನಿಯಮದಲ್ಲಿ ಪ್ರಸ್ತಾಪಿಸಲಾಗಿದೆ.

ಪತ್ರದಲ್ಲಿ ಚಿನ್ನದ ಭದ್ರತೆಯ ಮೌಲ್ಯ ಸಾಲ ಮರುಪಾವತಿ ಮಾಡದಿದ್ದರೆ ಹರಾಜು ಹಾಕುವ ಪ್ರಕ್ರಿಯೆ ಸಾಲ ಮರುಪಾವತಿಗೆ ನೀಡುವ ನೋಟಿಸ್‌ ಅವಧಿ ಬಗ್ಗೆ ನಮೂದಿಸಬೇಕಿದೆ. ಸಾಲಗಾರರು ಹರಾಜಿಗೂ ಮೊದಲು ಸಾಲ ಮರುಪಾವತಿ ಮಾಡುವ ಇರುವ ಅವಧಿ ಬಗ್ಗೆಯೂ ನಮೂದಿಸುವುದು ಕಡ್ಡಾಯ ಎಂದು ಹೇಳಿದೆ. 

ಸಾಲದ ಷರತ್ತು ಮತ್ತು ನಿಯಮಗಳ ಬಗ್ಗೆ ಸಾಲಗಾರರಿಗೆ ಸ್ಪಷ್ಟವಾಗಿ ತಿಳಿಸಬೇಕಿದೆ. ಎಷ್ಟು ಪ್ರಮಾಣದ ಬಡ್ಡಿಯ ಅನ್ವಯವಾಗಲಿದೆ ಎಂದು ಹೇಳಬೇಕಿದೆ ಎಂದು ಹೇಳಿದೆ.

ಸಾಲದಾತರು ಚಿನ್ನದ ಮೌಲ್ಯ ಆಧರಿಸಿ ಸಾಲ ನೀಡುತ್ತಾರೆ. ಚಿನ್ನದ ಮೌಲ್ಯ ಹೋಲಿಸಿ ಎಷ್ಟು ಪ್ರಮಾಣದ ಸಾಲ ನೀಡಲಾಗಿದೆ ಎಂಬ ಬಗ್ಗೆಯೂ ಸಾಲಗಾರರಿಗೆ ವಿವರಬೇಕಿದೆ. ಸಾಲ ಮತ್ತು ಚಿನ್ನದ ಮೌಲ್ಯದ ಅನುಪಾತವನ್ನು (ಎಲ್‌ಟಿವಿ) ನಮೂದಿಸಬೇಕಿದೆ. ಸ್ಥಳೀಯ ಭಾಷೆ ಅಥವಾ ಸಾಲಗಾರರು ಅಪೇಕ್ಷಿಸುವ ಭಾಷೆಯಲ್ಲಿಯೇ ವಿವರಣೆ ನೀಡಬೇಕಿದೆ. ಅನಕ್ಷರಸ್ಥ ಸಾಲಗಾರರಿಗೆ ಸಾಕ್ಷಿಗಳ ಸಮ್ಮುಖದಲ್ಲಿ ಷರತ್ತು ಮತ್ತು ನಿಯಮಗಳ ಬಗ್ಗೆ ವಿವರಿಸಿ ಹೇಳಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.