ADVERTISEMENT

ಕನಿಷ್ಠ ಮೊತ್ತ ಬ್ಯಾಂಕ್‌ಗಳ ವಿವೇಚನೆ: ಆರ್‌ಬಿಐ

ಪಿಟಿಐ
Published 11 ಆಗಸ್ಟ್ 2025, 13:32 IST
Last Updated 11 ಆಗಸ್ಟ್ 2025, 13:32 IST
<div class="paragraphs"><p>ಸಂಜಯ್ ಮಲ್ಹೋತ್ರಾ</p></div>

ಸಂಜಯ್ ಮಲ್ಹೋತ್ರಾ

   

–ಪಿಟಿಐ ಚಿತ್ರ

ಗೊಜಾರಿಯಾ (ಗುಜರಾತ್): ಉಳಿತಾಯ ಖಾತೆಯಲ್ಲಿ ಗ್ರಾಹಕರು ಇರಿಸಬೇಕಿರುವ ಕನಿಷ್ಠ ಮೊತ್ತ ಎಷ್ಟು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಬ್ಯಾಂಕ್‌ಗಳು ಸ್ವಾತಂತ್ರ್ಯ ಹೊಂದಿವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸೋಮವಾರ ಹೇಳಿದ್ದಾರೆ.

ADVERTISEMENT

ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಮೊತ್ತ ಇರಿಸಿಕೊಳ್ಳಬೇಕು ಎಂಬುದು ಆರ್‌ಬಿಐನ ನಿಯಂತ್ರಣ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡುವಾಗ ಈ ಮಾತು ಹೇಳಿದ್ದಾರೆ.

ಉಳಿತಾಯ ಖಾತೆಯಲ್ಲಿ ಇರಿಸಬೇಕಿರುವ ಕನಿಷ್ಠ ಮೊತ್ತವನ್ನು ಖಾಸಗಿ ಬ್ಯಾಂಕೊಂದು ಹೆಚ್ಚು ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಮಲ್ಹೋತ್ರಾ ಈ ಉತ್ತರ ನೀಡಿದ್ದಾರೆ. ‘ಕನಿಷ್ಠ ಮೊತ್ತ ಎಷ್ಟಿರಬೇಕು ಎಂಬುದನ್ನು ನಿಗದಿ ಮಾಡುವ ಸ್ವಾತಂತ್ರ್ಯವನ್ನು ಆಯಾ ಬ್ಯಾಂಕ್‌ಗಳಿಗೆ ನೀಡಲಾಗಿದೆ. ಕೆಲವು ಬ್ಯಾಂಕ್‌ಗಳು ₹10 ಸಾವಿರ, ಇನ್ನು ಕೆಲವು ಬ್ಯಾಂಕ್‌ಗಳು ₹2,000 ಕನಿಷ್ಠ ಮೊತ್ತ ನಿಗದಿ ಮಾಡಿವೆ. ಕೆಲವು ಬ್ಯಾಂಕ್‌ಗಳು ಕನಿಷ್ಠ ಮೊತ್ತ ಕಾಯ್ದುಕೊಳ್ಳುವ ಅಗತ್ಯವೇ ಇಲ್ಲ ಎಂದು ಹೇಳಿವೆ. ಇದು ಆರ್‌ಬಿಐನ ನಿಯಂತ್ರಣ ವ್ಯಾಪ್ತಿಯಲ್ಲಿ ಬರುವ ಸಂಗತಿ ಅಲ್ಲ’ ಎಂದು ಅವರು ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್‌ ನಗರ ಹಾಗೂ ಮಹಾನಗರ ಪ್ರದೇಶಗಳ ತನ್ನ ಗ್ರಾಹಕರು ಆಗಸ್ಟ್‌ 1ರ ನಂತರ ತೆರೆದ ಉಳಿತಾಯ ಖಾತೆಗಳಲ್ಲಿ ಮಾಸಿಕ ಸರಾಸರಿ ಕನಿಷ್ಠ ಮೊತ್ತವಾಗಿ ₹50 ಸಾವಿರ ಇರಿಸಬೇಕು ಎಂದು ಹೇಳಿದೆ. ಆದರೆ ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ, ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವ ಅಗತ್ಯ ಇಲ್ಲ ಎಂದು ತನ್ನ ಗ್ರಾಹಕರಿಗೆ ಹೇಳಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಹೋತ್ರಾ ಅವರು, ‘ಕೈಗೊಳ್ಳುವ ಯಾವುದೇ ತೀರ್ಮಾನದ ಪ್ರಯೋಜನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವುದನ್ನು ಖಾತರಿಪಡಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.