ADVERTISEMENT

ಚಿನ್ನವನ್ನು ಕಚ್ಚಾ ವಸ್ತುವಾಗಿ ಬಳಸುವ ಕೈಗಾರಿಕೆಗಳಿಗೆ ಸಾಲ ನೀಡಲು ಆರ್‌ಬಿಐ ಅಸ್ತು

ಪಿಟಿಐ
Published 30 ಸೆಪ್ಟೆಂಬರ್ 2025, 15:38 IST
Last Updated 30 ಸೆಪ್ಟೆಂಬರ್ 2025, 15:38 IST
ಆರ್‌ಬಿಐ ಲೋಗೊ
ಆರ್‌ಬಿಐ ಲೋಗೊ   

ಮುಂಬೈ: ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ತಯಾರಿಕಾ ಘಟಕಗಳಿಗೆ ಅಗತ್ಯವನ್ನು ಆಧರಿಸಿದ ಕಾರ್ಯಾಚರಣೆ ಬಂಡವಾಳ ಸಾಲ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಾಣಿಜ್ಯ ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಈ ಸೌಲಭ್ಯವು ಇದುವರೆಗೆ ಜುವೆಲ್ಲರಿಗಳಿಗೆ ಮಾತ್ರ ಲಭ್ಯವಿತ್ತು.

ಚಿನ್ನ ಅಥವಾ ಬೆಳ್ಳಿಯನ್ನು ಯಾವುದೇ ಸ್ವರೂಪದಲ್ಲಿ ಖರೀದಿಸುವ ಉದ್ದೇಶಕ್ಕೆ ಸಾಲ ಕೊಡಲು ಬ್ಯಾಂಕ್‌ಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ಅಧಿಕಾರ ಇರುವುದಿಲ್ಲ. ಕಚ್ಚಾ ಚಿನ್ನ ಅಥವಾ ಬೆಳ್ಳಿಯನ್ನು ಅಡಮಾನವಾಗಿ ಇರಿಸಿಕೊಂಡು ಸಾಲ ಕೊಡಲು ಕೂಡ ಬ್ಯಾಂಕ್‌ಗಳಿಗೆ ಅವಕಾಶ ಇಲ್ಲ.

ಆದರೆ ಕಾರ್ಯಾಚರಣೆ ಬಂಡವಾಳ ಸಾಲವನ್ನು ಜುವೆಲ್ಲರಿಗಳಿಗೆ ನೀಡಲು ಬ್ಯಾಂಕ್‌ಗಳಿಗೆ ಅನುವು ಮಾಡಿಕೊಡಲಾಗಿದೆ.

ADVERTISEMENT

ಸೋಮವಾರ ಕೆಲವು ನಿರ್ದೇಶನಗಳನ್ನು ಹೊರಡಿಸಿರುವ ಆರ್‌ಬಿಐ, ಜುವೆಲ್ಲರಿಗಳಿಗೆ ಕಾರ್ಯಾಚರಣೆ ಬಂಡವಾಳದ ರೂಪದಲ್ಲಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಇರುವ ಅವಕಾಶವನ್ನು ಇತರ ತಯಾರಿಕಾ ಘಟಕಗಳಿಗೂ ಅನ್ವಯಿಸಿ ವಿಸ್ತರಣೆ ಮಾಡಿದೆ.

ತಯಾರಿಕಾ ಚಟುವಟಿಕೆ ಅಥವಾ ಕೈಗಾರಿಕಾ ಸಂಸ್ಕರಣಾ ಚಟುವಟಿಕೆಗಳಲ್ಲಿ ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಇತರರಿಗೂ ಕಾರ್ಯಾಚರಣೆ ಬಂಡವಾಳ ಸಾಲವನ್ನು ನೀಡಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.

ಚಿನ್ನ ಅಥವಾ ಬೆಳ್ಳಿಯನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಅಥವಾ ತಯಾರಿಕಾ ಚಟುವಟಿಕೆಯಲ್ಲಿ ಇವುಗಳನ್ನು ಒಂದು ಅಗತ್ಯ ವಸ್ತುವನ್ನಾಗಿ ಬಳಕೆ ಮಾಡುವವರಿಗೆ ವಾಣಿಜ್ಯ ಬ್ಯಾಂಕ್‌ಗಳು ಹಾಗೂ 3ನೇ ಹಂತದ ಅಥವಾ 4ನೇ ಹಂತದ ನಗರ ಸಹಕಾರ ಬ್ಯಾಂಕ್‌ಗಳು ಕಾರ್ಯಾಚರಣೆ ಬಂಡವಾಳಕ್ಕೆ ಸಾಲ ನೀಡಬಹುದು ಎಂದು ಕೇಂದ್ರೀಯ ಬ್ಯಾಂಕ್‌ ಸ್ಪಷ್ಟಪಡಿಸಿದೆ.

ಚಿನ್ನ ಬೆಳ್ಳಿ ಬೆಲೆ ಇನ್ನಷ್ಟು ಹೆಚ್ಚಳ

ನವದೆಹಲಿ: ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹500ರಷ್ಟು ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1.20 ಲಕ್ಷಕ್ಕೆ ತಲುಪಿದೆ. ಅಮೆರಿಕದ ಡಾಲರ್‌ ದುರ್ಬಲ ಆಗಿದ್ದುದು ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರವನ್ನು ಇನ್ನಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆಯು ಈ ಏರಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಶೇಕಡ 99.5ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹500ರಷ್ಟು ಹೆಚ್ಚಾಗಿ ₹119400ಕ್ಕೆ ತಲುಪಿದೆ.  ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹500ರಷ್ಟು ಹೆಚ್ಚಳವಾಗಿ ₹150500ಕ್ಕೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ₹7000ದಷ್ಟು ಏರಿಕೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.