ADVERTISEMENT

ಚೆಕ್‌ ತ್ವರಿತ ವಿಲೇವಾರಿ: ಅನುಷ್ಠಾನ ಮುಂದೂಡಿದ ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 15:44 IST
Last Updated 24 ಡಿಸೆಂಬರ್ 2025, 15:44 IST
   

ಮುಂಬೈ/ಬೆಂಗಳೂರು: ಚೆಕ್‌ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಎರಡನೆಯ ಹಂತದ ಅನುಷ್ಠಾನವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮುಂದೂಡಿದೆ. ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಎರಡನೆಯ ಹಂತವನ್ನು ಬ್ಯಾಂಕ್‌ಗಳು ಜನವರಿ 3ರಿಂದ ಅನುಷ್ಠಾನಕ್ಕೆ ತರಬೇಕಿತ್ತು. ಆದರೆ ಅಕ್ಟೋಬರ್‌ 4ರಿಂದ ಜಾರಿಗೆ ಬಂದ ಮೊದಲ ಹಂತದ ಅನುಷ್ಠಾನದಲ್ಲಿಯೇ ಕೆಲವು ಸಮಸ್ಯೆಗಳು ತಲೆದೋರಿದ್ದವು.

‘ಮುಂದಿನ ಸೂಚನೆ ಬರುವವರೆಗೆ ಎರಡನೆಯ ಹಂತದ ಅನುಷ್ಠಾನವನ್ನು ಮುಂದಕ್ಕೆ ಹಾಕಲಾಗಿದೆ. ಬ್ಯಾಂಕ್‌ಗಳಿಗೆ ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡಲು ಹೀಗೆ ಮಾಡಲಾಗಿದೆ’ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

ADVERTISEMENT

ಮೊದಲ ಹಂತದ ಅನುಷ್ಠಾನ ಶುರುವಾಗಿ ತಿಂಗಳು ಕಳೆದ ನಂತರವೂ ಚೆಕ್‌ ತ್ವರಿತವಾಗಿ ವಿಲೇವಾರಿ ಆಗುವ ಸೌಲಭ್ಯ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ವ್ಯವಸ್ಥೆಯಲ್ಲಿ ದೋಷಗಳು ನಿವಾರಣೆ ಆಗಿರಲಿಲ್ಲ.

‘ಚೆಕ್‌ ಸಲ್ಲಿಸಿ ಹಲವು ದಿನಗಳು ಕಳೆದರೂ ಹಣದ ವರ್ಗಾವಣೆ ಆಗದಿರುವ ನಿದರ್ಶನಗಳು ಇವೆ. ಈ ರೀತಿ ಆಗಿರುವುದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಬ್ಯಾಂಕಿಂಗ್‌ ವ್ಯವಸ್ಥೆಯ ಪ್ರತಿನಿಧಿಗಳು ಹೇಳುತ್ತಿದ್ದಾರೆ’ ಎಂಬ ದೂರುಗಳು ನವೆಂಬರ್‌ ಮೊದಲ ವಾರದಲ್ಲಿ ಇದ್ದವು.

‘ಅಂತರ್‌ಬ್ಯಾಂಕ್‌ ವಹಿವಾಟು ಅನುಮೋದನೆಯಲ್ಲಿ ಸಮಸ್ಯೆ ಆಗುತ್ತಿದೆ. ₹10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳನ್ನು ಮಾನ್ಯ ಮಾಡುವಲ್ಲಿ ಸಮಸ್ಯೆ ಇದೆ. ಆದರೆ ಅದಕ್ಕಿಂತ ಕಡಿಮೆ ಮೊತ್ತದ ಚೆಕ್‌ಗಳನ್ನು ಮಾನ್ಯ ಮಾಡುವ ಕೆಲಸವು ಬೇಗನೆ ಆಗುತ್ತಿದೆ’ ಎಂದು ಆಗ ಸರ್ಕಾರಿ ಬ್ಯಾಂಕ್‌ ಒಂದರ ಅಧಿಕಾರಿಯೊಬ್ಬರು ಹೆಸರು
ಬಹಿರಂಗಪಡಿಸಬಾರದು ಎಂದು ಷರತ್ತಿನೊಂದಿಗೆ ‘ಪ್ರಜಾವಾಣಿ’ಗೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.