ADVERTISEMENT

ಆಗಸ್ಟ್‌ನಲ್ಲಿ ರೆಪೊ ದರ ಮತ್ತಷ್ಟು ಇಳಿಕೆ ಸಾಧ್ಯತೆ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2025, 6:09 IST
Last Updated 18 ಜುಲೈ 2025, 6:09 IST
   

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಮುಂಬರುವ ಆಗಸ್ಟ್ ತಿಂಗಳ ನೀತಿ ಸಭೆಯಲ್ಲಿ ರೆಪೊ ದರದಲ್ಲಿ 25 ಮೂಲಾಂಶಗಳಷ್ಟು ಕಡಿತ ಮಾಡುವ ಮೂಲಕ ರೆಪೊ ದರವನ್ನು ಶೇ 5.25ಕ್ಕೆ ಇಳಿಸುವ ಸಾಧ್ಯತೆ ಇದೆ ಎಂದು ಐಸಿಐಸಿಐ ಬ್ಯಾಂಕ್‌ನ ವರದಿ ತಿಳಿಸಿದೆ.

ಭಾರತದ್ಲಿ ಬೆಳವಣಿಗೆಯ ಮುನ್ನೋಟದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ ಎಂದು ವರದಿ ವಿವರಿಸಿದೆ. ನಗರ ಬೇಡಿಕೆ ದುರ್ಬಲವಾಗಿದ್ದರೂ, ಗ್ರಾಮೀಣ ಬೇಡಿಕೆ ಇನ್ನೂ ಬಲವಾಗಿಯೇ ಇದೆ. ಅಮೆರಿಕಕ್ಕೆ ಸರಕುಗಳ ರಫ್ತು ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದರೆ, ಇತರ ಪ್ರದೇಶಗಳಿಗೆ ರಫ್ತು ಪ್ರಮಾಣ ದುರ್ಬಲವಾಗಿಯೇ ಇದೆ.

ಈ ಪ್ರವೃತ್ತಿಗಳು ಮತ್ತು ಪ್ರಸ್ತುತ ಹಣದುಬ್ಬರ ಪರಿಸ್ಥಿತಿಯನ್ನು ಪರಿಗಣಿಸಿ, ಆಗಸ್ಟ್ ತಿಂಗಳು ದರ ಕಡಿತಕ್ಕೆ ಸರಿಯಾದ ಸಮಯ ಎಂದು ವರದಿ ತಿಳಿಸಿದೆ.

ADVERTISEMENT

ಕಳೆದ ಎಂಪಿಸಿ ಸಭೆಯ ನಂತರ ಹಣದುಬ್ಬರವು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. 2026ರ ಹಣಕಾಸು ವರ್ಷದಲ್ಲಿ ಹಣದುಬ್ಬರವು ಸರಾಸರಿ ಶೇ 2.9 ರಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಆರ್‌ಬಿಐನ ಹಿಂದಿನ ಅಂದಾಜು ದರಕ್ಕಿಂತ (ಶೇ 3.7) ತೀರಾ ಕಡಿಮೆಯಾಗಿದೆ.

ಹಣದುಬ್ಬರದಲ್ಲಿನ ಈ ಇಳಿಕೆಯ ಪ್ರವೃತ್ತಿಯು ಮತ್ತಷ್ಟು ನೀತಿ ಸಡಿಲಿಕೆಗೆ ಅವಕಾಶವನ್ನು ತೆರೆಯುತ್ತದೆ. ವಿಶೇಷವಾಗಿ ಎಂಪಿಸಿ ಪ್ರಸ್ತುತ ತಟಸ್ಥ ನಿಲುವನ್ನು ಕಾಯ್ದುಕೊಂಡಿರುವುದರಿಂದ ನಿರ್ಧಾರಗಳು ಆರ್ಥಿಕ ದತ್ತಾಂಶವನ್ನು ಅವಲಂಬಿಸಿರುತ್ತದೆ ಎಂದು ವರದಿ ತಿಳಿಸಿದೆ.

ಹಣದುಬ್ಬರವು Q4 ಮತ್ತು 2027ರ ಹಣಕಾಸು ವರ್ಷದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿಯು ಉಲ್ಲೇಖಿಸಿದೆ.

ಜೂನ್ 6ರಂದು ಆರ್‌ಬಿಐ, ರೆಪೊ ದರದಲ್ಲಿ 50 ಮೂಲಾಂಶದಷ್ಟು ಇಳಿಕೆ ಮಾಡಿ 5.5ಕ್ಕೆ ಇಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.