ADVERTISEMENT

ವೈಯಕ್ತಿಕ ಸಾಲ ನಿಯಮ ಬಿಗಿ: ಬ್ಯಾಂಕ್‌ಗಳು, ಹಣಕಾಸು ಕಂಪನಿಗಳಿಗೆ RBI ನಿರ್ದೇಶನ

ಪಿಟಿಐ
Published 16 ನವೆಂಬರ್ 2023, 16:00 IST
Last Updated 16 ನವೆಂಬರ್ 2023, 16:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ನೀಡುವ ಅಡಮಾನರಹಿತ ವೈಯಕ್ತಿಕ ಸಾಲದ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಇನ್ನಷ್ಟು ಬಿಗಿಗೊಳಿಸಿದೆ.

ಸಾಲ ನೀಡುವುದರಿಂದ ಬ್ಯಾಂಕ್‌ಗಳಿಗೆ ಆಗಬಹುದಾದ ನಷ್ಟವನ್ನು ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವನ್ನು (ರಿಸ್ಕ್‌ ವೇಯ್ಟ್‌) ಈಗಿರುವ ಶೇ 100ರಿಂದ ಶೇ 125ಕ್ಕೆ ಹೆಚ್ಚಿಸಿದೆ. ಬ್ಯಾಂಕ್‌ಗಳು ಅಡಮಾನರಹಿತ ವೈಯಕ್ತಿಕ ಸಾಲ ನೀಡುವಾಗ ಅದರಿಂದ ಬ್ಯಾಂಕ್‌ಗೆ ನಷ್ಟವಾಗುವ ಸಾಧ್ಯತೆಯು ಯಾವ ಮಟ್ಟದಲ್ಲಿ ಇದೆ ಎನ್ನವುದನ್ನು ಗಮನದಲ್ಲಿ ಇಟ್ಟುಕೊಂಡು ಹಣವನ್ನು ತೆಗೆದಿರಿಸಬೇಕಾಗುತ್ತದೆ. ಸಾಲ ನೀಡುವುದರಿಂದ ಬ್ಯಾಂಕ್‌ಗಳಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚಿಗೆ ಇದ್ದರೆ ಅದು ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ.

ಅಡಮಾನರಹಿತ ವೈಯಕ್ತಿಕ ಸಾಲ ನೀಡಿಕೆ ಹೆಚ್ಚಾಗುತ್ತಿರುವ ಬಗ್ಗೆ ಆರ್‌ಬಿಐ ಗವರ್ನರ್ ಈಚೆಗಷ್ಟೇ ಕಳವಳ ವ್ಯಕ್ತಪಡಿಸಿದ್ದರು. ಇದನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ಈ ಬದಲಾವಣೆ  ಮಾಡಿದೆ.‌ ಅದರಂತೆ, ಗೃಹ ಸಾಲ, ಶಿಕ್ಷಣ ಸಾಲ, ವಾಹನ ಸಾಲವನ್ನು ಹೊರತುಪಡಿಸಿ ಉಳಿದ ವೈಯಕ್ತಿಕ ಸಾಲಗಳಿಗೆ ಬ್ಯಾಂಕ್‌ಗಳು ತೆಗೆದಿರಿಸುವ ಮೊತ್ತದ ಪ್ರಮಾಣವು ಶೇ 125ರಷ್ಟು ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ADVERTISEMENT

ಆದರೆ, ಚಿನ್ನ ಮತ್ತು ಚಿನ್ನಾಭರಣ ಅಡಮಾನ ಇಟ್ಟು ಪಡೆಯುವ ಸಾಲಕ್ಕೆ ಇದು ಅನ್ವಯಿಸುವುದಿಲ್ಲ. ಈ ಸಾಲಗಳಿಗೆ ರಿಸ್ಕ್‌ ವೇಯ್ಟ್‌ ಈಗಿರುವ ಶೇ 100ರಷ್ಟೇ ಮುಂದುವರಿಯಲಿದೆ ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್‌ಗಳ ವೈಯಕ್ತಿಕ ಸಾಲದ ಮೊತ್ತವು 2023ರ ಸೆಪ್ಟೆಂಬರ್ ಅಂತ್ಯಕ್ಕೆ ₹48.26 ಲಕ್ಷ ಕೋಟಿಯಷ್ಟು ಇದೆ. 2022ರ ಸೆಪ್ಟೆಂಬರ್‌ ಅಂತ್ಯಕ್ಕೆ ಹೋಲಿಸಿದರೆ ಶೇ 30ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.