ಬಳ್ಳಾರಿ: ‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಒಣಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್‌ಗೆ ಪತ್ರ ಬರೆದಿದ್ದಾರೆ.
‘ಒಣಮೆಣಸಿನಕಾಯಿಯ ಕನಿಷ್ಠ ಮಧ್ಯಂತರ ಬೆಲೆಯನ್ನು (ಎಂಐಪಿ) ಕ್ವಿಂಟಲ್‌ಗೆ ₹11,781 ರಿಂದ ₹13,500ಕ್ಕೆ ಏರಿಸಬೇಕು. ಒಟ್ಟು ಉತ್ಪಾದನೆಯ ಕನಿಷ್ಠ ಶೇ 75ರಷ್ಟು ಉತ್ಪನ್ನಕ್ಕೆ ಎಂಐಪಿ ಸಿಗಬೇಕು’ ಎಂದು ಅವರು ತಿಳಿಸಿದ್ದಾರೆ.
‘ಒಣಮೆಣಸಿನಕಾಯಿಯ ಬೆಲೆ ಕೇಂದ್ರದ ದೇಶೀಯ ಮತ್ತು ರಫ್ತು ನೀತಿಗಳ ಮೇಲೆ ಅವಲಂಬಿತವಾಗಿದ್ದು, ಇದು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ಬೆಲೆ ಕೊರತೆ ಪಾವತಿಯ ಸಂಪೂರ್ಣ ಮೊತ್ತವನ್ನು ಕೇಂದ್ರವೇ ಭರಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ರಾಜ್ಯದಲ್ಲಿ ಗುಂಟೂರು ಮೆಣಸಿನಕಾಯಿ (ಮಳೆಯಾಶ್ರಿತ) ಉತ್ಪಾದನಾ ಕರ್ನಾಟಕ ವೆಚ್ಚವು ಕ್ವಿಂಟಲ್‌ಗೆ ₹12,675 ಇದೆ. ಆದರೆ, ಸದ್ಯದ ದರ ₹8,300 ಇದೆ. ಇದು ರೈತರಿಗಾದ ನಷ್ಟ ಮಾತ್ರವಲ್ಲ, ಅವರ ಅಳಿವು ಉಳಿವಿನ ಪ್ರಶ್ನೆ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸಣ್ಣ ರೈತರು ಮೆಣಸಿನಕಾಯಿ ಬೆಳೆಯನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಎಂಐಪಿ ನಿಗದಿಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರವೇನೋ ತನ್ನ ಕೆಲಸ ಮಾಡಿದೆ. ರಾಜ್ಯದಿಂದ ಆಯ್ಕೆಯಾದ ಸಂಸದರು ಕೇಂದ್ರ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರೈತರನ್ನು ಉಳಿಸಬೇಕು.-ಮಾಧವ ರೆಡ್ಡಿ ಅಧ್ಯಕ್ಷ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.