ADVERTISEMENT

‘ಸೆರೆಲಾಕ್‌’ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಪಿಟಿಐ
Published 18 ಏಪ್ರಿಲ್ 2024, 16:01 IST
Last Updated 18 ಏಪ್ರಿಲ್ 2024, 16:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಇಂಡಿಯಾವು, ಭಾರತ ಸೇರಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿರುವ ತನ್ನ ಶಿಶು ಆಹಾರ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿಸುತ್ತಿದೆ ಎಂಬ ಆರೋಪವು ವಿವಾದ ಸೃಷ್ಟಿಸಿದೆ.

ಮಕ್ಕಳ ಪೋಷಕರು ಹಾಗೂ ಗ್ರಾಹಕರಿಂದ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಈ ಕುರಿತು ಪರಿಶೀಲನೆ ನಡೆಸಲು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ. ಶಿಶು ಆಹಾರವಾದ ‘ಸೆರೆಲಾಕ್‌’ನಲ್ಲಿ ಹೆಚ್ಚುವರಿ ಸಕ್ಕರೆ ಬೆರೆಸುತ್ತಿದೆ ಎಂದು ಹೇಳಲಾಗಿದೆ. 

ADVERTISEMENT

‘ನೆಸ್ಲೆ ವಿರುದ್ಧ ಕೇಳಿಬಂದಿರುವ ಆರೋಪ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಕಂ‍ಪನಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಬೆಳಕಿಗೆ ಬಂದಿದ್ದು ಹೇಗೆ?:

ನೆಸ್ಲೆ ಕಂಪನಿಯು ಶಿಶು ಉತ್ಪನ್ನಗಳಲ್ಲಿ ಸಕ್ಕರೆ ಅಂಶ ಬೆರೆಸುತ್ತಿರುವ ಬಗ್ಗೆ ಸ್ವಿಟ್ಜರ್‌ಲೆಂಡ್‌ನ ಸ್ವಯಂಸೇವಾ ಸಂಸ್ಥೆ ಪಬ್ಲಿಕ್‌ ಐ ಹಾಗೂ ಇಂಟರ್‌ನ್ಯಾಷನಲ್ ಬೇಬಿ ಫುಡ್ ಆ್ಯಕ್ಷನ್ ನೆಟ್‌ವರ್ಕ್‌ (ಐಬಿಎಫ್‌ಎಎನ್‌) ತನಿಖೆಗೆ ಮುಂದಾಗಿದ್ದವು. ಕಂಪನಿಯು ವಿವಿಧ ದೇಶಗಳಲ್ಲಿ ಮಾರಾಟ ಮಾಡುವ 150 ಬಗೆಯ ಶಿಶು ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆಸಿ ಈ ಕುರಿತು ವರದಿ ಪ್ರಕಟಿಸಿವೆ. ಇದನ್ನು ಉಲ್ಲೇಖಿಸಿ ದಿ ಗಾರ್ಡಿಯನ್‌ ಪತ್ರಿಕೆ ವರದಿ ಪ್ರಕಟಿಸಿದೆ.

ಭಾರತ ಸೇರಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಮಾರಾಟ ಮಾಡುವ ಉತ್ಪನ್ನಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ಸೇರಿಸುತ್ತಿದೆ. ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದ ದೇಶಗಳಲ್ಲೂ ಇದೇ ಮಾದರಿಯನ್ನು ಅನುಸರಿಸುತ್ತಿದೆ. ಆದರೆ, ಯುರೋಪ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉತ್ಪನ್ನಗಳು ಸಕ್ಕರೆ ಅಂಶದಿಂದ ಮುಕ್ತವಾಗಿವೆ ಎಂದು ವರದಿ ತಿಳಿಸಿದೆ.

ನೆಸ್ಲೆ ಆರು ತಿಂಗಳ ಶಿಶುಗಳಿಗೆ ಸೆರೆಲಾಕ್‌ ಆಹಾರ ನೀಡುತ್ತದೆ. ಬ್ರಿಟನ್‌ ಮತ್ತು ಜರ್ಮನಿಯಲ್ಲಿ ಮಾರಾಟ ಮಾಡುವ ಗೋಧಿ  ಆಧಾರಿತ ಈ ಉತ್ಪನ್ನದಲ್ಲಿ ಸಕ್ಕರೆ ಅಂಶ ಬೆರೆಸುವುದಿಲ್ಲ. ಆದರೆ, ಭಾರತದಲ್ಲಿ ಮಾರಾಟ ಮಾಡುವ 15 ಸೆರೆಲಾಕ್‌ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದು ಬಾರಿ ಮಗುವಿಗೆ ಕೊಡುವ ಸೆರೆಲಾಕ್‌ನಲ್ಲಿ 2.7 ಗ್ರಾಂನಷ್ಟು ಸಕ್ಕರೆ ಬೆರೆಸಿರುವುದು ಪತ್ತೆಯಾಗಿದೆ ಎಂದು ಹೇಳಿದೆ.

ಅಲ್ಲದೆ, ಪ್ಯಾಕಿಂಗ್‌ ಮೇಲೂ ಸಕ್ಕರೆ ಅಂಶ ಇರುವ ಬಗ್ಗೆ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ಥಾಯ್ಲೆಂಡ್‌ನಲ್ಲಿ ಮಾರಾಟ ಮಾಡುವ ಉತ್ಪನ್ನಗಳಲ್ಲಿ (ಒಂದು ಬಾರಿ ಮಕ್ಕಳಿಗೆ ನೀಡುವಷ್ಟು ಸೆರೆಲಾಕ್‌ನಲ್ಲಿ) 6 ಗ್ರಾಂನಷ್ಟು ಸಕ್ಕರೆ ಅಂಶವಿದೆ. ಫಿಲಿಪ್ಪೀನ್ಸ್‌ನಲ್ಲಿ ಮಾರಾಟವಾಗುವ ಉತ್ಪನ್ನಗಳಲ್ಲಿ 7.3 ಗ್ರಾಂನಷ್ಟು ಸಕ್ಕರೆ ಅಂಶ ಕಂಡುಬಂದಿದೆ. ಈ ದೇಶದಲ್ಲಿ ಎಂಟು ಉತ್ಪನ್ನಗಳ ಪೈಕಿ ಐದರಲ್ಲಿ ಪರೀಕ್ಷೆ ನಡೆಸಿದಾಗ ಈ ಸಂಗತಿ ಬಯಲಾಗಿದೆ. ಆದರೆ, ಪ್ಯಾಕಿಂಗ್‌ ಮೇಲೆ ಈ ಮಾಹಿತಿಯನ್ನು ಕಂಪನಿಯು ನಮೂದಿಸಿಲ್ಲ. ‘ಸೆರೆಲಾಕ್’ನ ಧಾನ್ಯಗಳ ಉತ್ಪನ್ನದಲ್ಲಿಯೂ ಹೆಚ್ಚುವರಿ ಸಕ್ಕರೆ ಇದೆ ಎಂದು ವಿವರಿಸಿದೆ.

ಇಂತಹ ಆಹಾರವನ್ನು ಶಿಶುಗಳು ಸೇವಿಸಿದರೆ ಸ್ಥೂಲಕಾಯ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ಇದೆ ಎಂದು ಹೇಳಲಾಗಿದೆ. 

ಒಂದೇ ದಿನ ₹8137 ಕೋಟಿ ನಷ್ಟ : ಶಿಶು ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಅಂಶ ಬೆರೆಸಿದ ಆರೋಪ ಕೇಳಿಬಂದ ಬೆನ್ನಲ್ಲೇ ಜಾಗತಿಕ ಪ್ರಮುಖ ಎಫ್‌ಎಂಸಿಜಿಯಾದ ನೆಸ್ಲೆ ಕಂಪನಿಯ ಷೇರಿನ ಮೌಲ್ಯ ಗುರುವಾರ ಶೇ 3ರಷ್ಟು ಕುಸಿತ ಕಂಡಿದೆ.  ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 3.33ರಷ್ಟು ಕುಸಿತ ಕಂಡಿದ್ದು ಪ್ರತಿ ಷೇರಿನ ಬೆಲೆ ₹2462.75 ಆಗಿದೆ. ದಿನದ ವಹಿವಾಟಿನಲ್ಲಿ ಒಂದು ಸಂದರ್ಭದಲ್ಲಿ ಷೇರಿನ ಮೌಲ್ಯವು ಶೇ 5.40ರಷ್ಟು ಕುಸಿತ ಕಂಡಿತ್ತು.  ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 2.94ರಷ್ಟು ಕುಸಿತ ಕಂಡಿದ್ದು ಪ್ರತಿ ಷೇರಿನ ಬೆಲೆಯು ₹2471ಕ್ಕೆ ತಲುಪಿದೆ.  ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹8137 ಕೋಟಿಯಷ್ಟು ಕರಗಿದೆ. ಒಟ್ಟು ಎಂ–ಕ್ಯಾಪ್‌ ₹2.37 ಲಕ್ಷ ಕೋಟಿ ಆಗಿದೆ.

ಶೇ 30ರಷ್ಟು ಸಕ್ಕರೆ ಅಂಶ ಕಡಿತ ನೆಸ್ಲೆ ಸ್ಪಷ್ಟನೆ : ‘ಕಳೆದ ಐದು ವರ್ಷಗಳಿಂದ ಭಾರತದಲ್ಲಿ ಮಾರಾಟ ಮಾಡುವ ತನ್ನ ಉತ್ಪನ್ನಗಳಿಗೆ ಸಕ್ಕರೆ ಅಂಶ ಬೆರೆಸುವ ಪ್ರಮಾಣವನ್ನು ಶೇ 30ರಷ್ಟು ಕಡಿತಗೊಳಿಸಲಾಗಿದೆ’ ಎಂದು ನೆಸ್ಲೆ ಇಂಡಿಯಾ ಕಂಪನಿ ಸ್ಪಷ್ಟಪಡಿಸಿದೆ. ‘ಕಂಪನಿಯು ಆಹಾರ ಗುಣಮಟ್ಟ ಸುರಕ್ಷತೆ ಹಾಗೂ ರುಚಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಕ್ಕರೆ ಅಂಶವನ್ನು ಕಡಿಮೆಗೊಳಿಸುವ ಸಂಬಂಧ ನಿಯಮಿತವಾಗಿ ಉತ್ಪನ್ನಗಳನ್ನು ಪರೀಕ್ಷಿಸಲಾಗುತ್ತಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ‘ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ರೂಪಿಸಿರುವ ಮಾನದಂಡದ ಅನ್ವಯವೇ ಭಾರತದಲ್ಲಿ ಶಿಶು ಆಹಾರ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. ‘ಗ್ರಾಹಕರಿಗೆ ಉತ್ತಮ ಆಹಾರ ಪೂರೈಸಲು ಬದ್ಧರಾಗಿದ್ದೇವೆ. 100 ವರ್ಷಗಳಿಂದಲೂ ಈ ಬದ್ಧತೆ ಕಾಯ್ದುಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.