ನವದೆಹಲಿ: ನೈಸರ್ಗಿಕ ಅನಿಲ ಉತ್ಪಾದನೆ ವಿವಾದಕ್ಕೆ ಸಂಬಂಧಿಸಿದಂತೆ ₹24,500 ಕೋಟಿ ಪರಿಹಾರ ಕೋರಿ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ಗೆ, ಕೇಂದ್ರ ಸರ್ಕಾರವು ನೋಟಿಸ್ ನೀಡಿದೆ.
ರಿಲಯನ್ಸ್ ಮತ್ತು ಅದರ ಪಾಲುದಾರ ಕಂಪನಿಯಾದ ಬ್ರಿಟನ್‌ನ ಬಿಪಿ ಪಿಎಲ್‌ಸಿ, ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ (ಒಎನ್‌ಜಿಸಿ) ಸೇರಿದ ಕೃಷ್ಣ ಗೋದಾವರಿ ಪ್ರದೇಶದ ಆಳ ಸಮುದ್ರದಲ್ಲಿ ನೈಸರ್ಗಿಕ ಅನಿಲ ಉತ್ಪಾದಿಸಿ ಮಾರಾಟ ಮಾಡಿರುವ ಆರೋಪ ಹೊತ್ತಿವೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕಂಪನಿಗಳು ಪರಿಹಾರ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ ಎಂದು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯು ತೀರ್ಪು ನೀಡಿತ್ತು. ಇದನ್ನು ಫೆಬ್ರುವರಿ 14ರಂದು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ರದ್ದುಪಡಿಸಿದೆ. ಹಾಗಾಗಿ, ಕೇಂದ್ರವು ದಂಡ ವಸೂಲಿಗೆ ಮುಂದಾಗಿದೆ.
ದಂಡ: ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಪ್ರಸಕ್ತ ವರ್ಷದ ಜನವರಿಯಲ್ಲಿ ಐದು ಗಿಗಾವಾಟ್ ಸಾಮರ್ಥ್ಯ ಬ್ಯಾಟರಿ ಘಟಕ ಸ್ಥಾಪಿಸುವುದಾಗಿ ರಿಲಯನ್ಸ್ ಕಂಪನಿಯು ಕೇಂದ್ರ ಭಾರಿ ಕೈಗಾರಿಕಾ ಸಚಿವಾಲಯದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಉಲ್ಲಂಘಿಸಿರುವುದರಿಂದ ಮಾರ್ಚ್ 3ರ ವರೆಗೆ ಒಟ್ಟು ₹3.1 ಕೋಟಿ ದಂಡ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.