ADVERTISEMENT

ರಿಲಯನ್ಸ್ ಲಾಭ ಶೇ 15ರಷ್ಟು ಇಳಿಕೆ

ಕಂಪನಿಯ ವರಮಾನದಲ್ಲಿ ಶೇಕಡ 15ರಷ್ಟು ಜಿಗಿತ

ಪಿಟಿಐ
Published 20 ಜನವರಿ 2023, 15:43 IST
Last Updated 20 ಜನವರಿ 2023, 15:43 IST

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ (ಆರ್‌ಐಎಲ್‌) ಕಂಪನಿಯ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭವು ಶೇಕಡ 15ರಷ್ಟು ಕಡಿಮೆ ಆಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 15,792 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 18,549 ಕೋಟಿ ಲಾಭ ದಾಖಲಿಸಿತ್ತು.

ಕಂಪನಿಯು ಸಾಲಗಳ ಮರುಪಾವತಿಗೆ ಮಾಡುವ ವೆಚ್ಚವು ಶೇಕಡ 36.4ರಷ್ಟು ಹೆಚ್ಚಾಗಿದ್ದು, ₹ 5,201 ಕೋಟಿಗೆ ತಲುಪಿದೆ. ಕಂಪನಿಯು ಸಾಲವಾಗಿ ಪಡೆದ ಹಣವನ್ನು ಪರಿಸರಪೂರಕ ಇಂಧನ ವಲಯದಲ್ಲಿ ವಹಿವಾಟು ವಿಸ್ತರಿಸಲು ಹಾಗೂ ದೂರಸಂಪರ್ಕ ಮತ್ತು ರಿಟೇಲ್‌ ವಹಿವಾಟು ವಿಸ್ತರಣೆ ಮಾಡಲು ಬಳಸಿಕೊಳ್ಳುತ್ತಿದೆ. ಕಂಪನಿಯ ಸಾಲದ ಮೊತ್ತವು ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹ 59 ಸಾವಿರ ಕೋಟಿಯಷ್ಟು ಹೆಚ್ಚಾಗಿದ್ದು, ₹ 3.03 ಲಕ್ಷ ಕೋಟಿಗೆ ತಲುಪಿದೆ.

ವರಮಾನವು ಶೇ 15ರಷ್ಟು ಹೆಚ್ಚಾಗಿದ್ದು, ₹ 2.40 ಲಕ್ಷ ಕೋಟಿಗೆ ತಲುಪಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಡಿಸೆಂಬರ್ ತ್ರೈಮಾಸಿಕದ ಲಾಭವು ಶೇ 15ರಷ್ಟು ಜಾಸ್ತಿ ಆಗಿದೆ.

ADVERTISEMENT

ಆರ್‌ಐಎಲ್‌ನ ಅಂಗಸಂಸ್ಥೆಯಾದ ಜಿಯೊ ಗ್ರಾಹಕರ ಸಂಖ್ಯೆಯು 43.3 ಕೋಟಿಗೆ ಏರಿಕೆಯಾಗಿದ್ದು, ಅದರ ನಿವ್ವಳ ಲಾಭ ₹ 4,881 ಕೋಟಿಗೆ ತಲುಪಿದೆ. ಪ್ರತಿ ಗ್ರಾಹಕನಿಂದ ಬರುವ ವರಮಾನದಲ್ಲಿ ಶೇ 17.5ರಷ್ಟು ಹೆಚ್ಚಳ ಆಗಿದೆ. ದೇಶದ 134 ಪಟ್ಟಣ ಹಾಗೂ ನಗರಗಳಲ್ಲಿ ಜಿಯೊ 5ಜಿ ಸೇವೆಗಳನ್ನು ನೀಡುತ್ತಿದೆ. ರಿಟೇಲ್ ವಹಿವಾಟಿನ ನಿವ್ವಳ ಲಾಭ ₹ 2,400 ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.