logo
ಮುಂಬೈ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲಾಭವು ಶೇ 9.6ರಷ್ಟು ಹೆಚ್ಚಾಗಿದೆ. ಕಂಪನಿಯ ರಿಟೇಲ್ ವಹಿವಾಟು ಹಾಗೂ ದೂರಸಂಪರ್ಕ ವಹಿವಾಟಿನಲ್ಲಿ ಉತ್ತಮ ಸಾಧನೆ ಕಂಡುಬಂದಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹18,165 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹16,563 ಕೋಟಿ ಲಾಭ ಆಗಿತ್ತು. ಆದರೆ ಈ ವರ್ಷದ ಜುಲೈ ತ್ರೈಮಾಸಿಕದಲ್ಲಿ ಆಗಿದ್ದ ₹26,994 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭ ಶೇ 33ರಷ್ಟು ಇಳಿದಿದೆ.
ದೂರಸಂಪರ್ಕ ಸೇವೆಗಳ ವರಮಾನದಲ್ಲಿ ಶೇ 13ರಷ್ಟು, ರಿಟೇಲ್ ವಹಿವಾಟುಗಳ ವರಮಾನದಲ್ಲಿ ಶೇ 22ರಷ್ಟು ಹೆಚ್ಚಳ ಆಗಿದೆ. ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಲಾಭ ಶೇ 13ರಷ್ಟು ಹೆಚ್ಚಾಗಿ ₹7,379 ಕೋಟಿಗೆ ತಲುಪಿದೆ. ಪ್ರತಿ ಗ್ರಾಹಕನಿಂದ ಕಂಪನಿಗೆ ತಿಂಗಳಿಗೆ ಸಿಗುವ ವರಮಾನವು ₹208 ಇದ್ದಿದ್ದು ₹211.4ಕ್ಕೆ ತಲುಪಿದೆ.
ಎಫ್‌ಎಂಸಿಜಿ ಉತ್ಪನ್ನಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಸೇವೆಗಳನ್ನು ಒದಗಿಸುತ್ತಿರುವ ರಿಲಯನ್ಸ್ ಕಂಪನಿಯ ಜಿಯೊಮಾರ್ಟ್ ವೇದಿಕೆಯು ಈಗ ದೇಶದ ಒಂದು ಸಾವಿರಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ ಎಂದು ಕಂಪನಿ ತಿಳಿಸಿದೆ.
ಬ್ಲಿಂಕಿಟ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್‌ನಂತಹ ಕಂಪನಿಗಳ ಜೊತೆ ಜಿಯೊಮಾರ್ಟ್ ಪೈಪೋಟಿ ನಡೆಸುತ್ತಿದೆ. ಜಿಯೊಮಾರ್ಟ್ ಮೂಲಕ 10 ನಗರಗಳಲ್ಲಿ 30 ನಿಮಿಷಗಳ ಒಳಗೆ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಯೊಮಾರ್ಟ್ ಹೊಸದಾಗಿ 58 ಲಕ್ಷ ಗ್ರಾಹಕರನ್ನು ಪಡೆದುಕೊಂಡಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.