ADVERTISEMENT

ರಿಲಯನ್ಸ್, ಟಿಸಿಎಸ್ ದೇಶದ ಮುಂಚೂಣಿ ಕಂಪನಿಗಳು

ಹುರೂನ್ ಇಂಡಿಯಾ, ಬುಗುಂಡಿ ಪ್ರೈವೇಟ್ ವರದಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 22:35 IST
Last Updated 9 ಡಿಸೆಂಬರ್ 2021, 22:35 IST
   

ಬೆಂಗಳೂರು: ಹುರೂನ್ ಇಂಡಿಯಾ ಮತ್ತು ಎಕ್ಸಿಸ್ ಬ್ಯಾಂಕ್‌ನ ಬುಗುಂಡಿ‍ಪ್ರೈವೇಟ್‌ ಜೊತೆಯಾಗಿ ಭಾರತದ ಮುಂಚೂಣಿ 500 ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಮೊದಲ ಸ್ಥಾನದಲ್ಲಿ ಇದೆ. ಈ ಪಟ್ಟಿಯಲ್ಲಿ ಇರುವ 53 ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಮುಖ್ಯ ಕಚೇರಿಯನ್ನು ಹೊಂದಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರಮವಾಗಿ ಎರಡು ಹಾಗೂ ಮೂರನೆಯ ಸ್ಥಾನಗಳಲ್ಲಿ ಇವೆ. ಕಂಪನಿಗಳ ಮೌಲ್ಯದ ಆಧಾರದಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ‘ಕಂಪನಿಗಳ ಈಗಿನ ಸಾಧನೆ ಹಾಗೂ ಭವಿಷ್ಯದಲ್ಲಿ ಅವು ತೋರಬಹುದಾದ ಸಾಧನೆಯನ್ನು ಪರಿಗಣಿಸಿ ಅವುಗಳ ಮೌಲ್ಯವನ್ನು ತೀರ್ಮಾನಿಸಲಾಗಿದೆ’ ಎಂದು ಹುರೂನ್‌ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್ ರೆಹಮಾನ್ ಜುನೈದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಈ ಐದುನೂರು ಕಂಪನಿಗಳ ಒಟ್ಟು ಮೌಲ್ಯದಲ್ಲಿ ಶೇಕಡ 68ರಷ್ಟು ಹೆಚ್ಚಳ ಕಂಡುಬಂದಿದೆ. 200 ಕಂಪನಿಗಳ ಮೌಲ್ಯವು ದುಪ್ಪಟ್ಟಾಗಿದೆ. 20 ಕಂಪನಿಗಳ ಮೌಲ್ಯವು ₹ 1 ಲಕ್ಷ ಕೋಟಿಗಿಂತ ಹೆಚ್ಚಾಗಿದ್ದು, ರಿಲಯನ್ಸ್, ಟಿಸಿಎಸ್, ಇನ್ಫೊಸಿಸ್ ಮತ್ತು ಐಸಿಐಸಿಐ ಬ್ಯಾಂಕ್‌ ಮೌಲ್ಯ ಹೆಚ್ಚಳದಲ್ಲಿ ಮುಂಚೂಣಿಯಲ್ಲಿ
ಇವೆ.

ADVERTISEMENT

ಕೋವಿಡ್‌–19ಕ್ಕೆ ಲಸಿಕೆಗಳನ್ನು ಉತ್ಪಾದಿಸುವ ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ ಕಂಪನಿಯ ಮೌಲ್ಯವು 2021ರಲ್ಲಿ ಶೇಕಡ 127ರಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಷೇರುಪೇಟೆಯಲ್ಲಿ ನೋಂದಾಯಿತ ಆಗಿರದ ಕಂಪನಿಗಳ ಪೈಕಿ ಅತ್ಯಂತ ಮೌಲ್ಯಯುತ ಕಂಪನಿ ಇದು ಎಂದು ಹುರೂನ್ ಇಂಡಿಯಾ ಮತ್ತು ಬುಗುಂಡಿ ಪ್ರೈವೇಟ್ ವರದಿ ಹೇಳಿದೆ.

ಈ ವರದಿಯಲ್ಲಿ ಸ್ಥಾನ ಪಡೆದಿರುವ 500 ಕಂಪನಿಗಳು ದೇಶದ 43 ನಗರಗಳಿಂದ ಕಾರ್ಯಾಚರಿಸುತ್ತಿವೆ. 500 ಕಂಪನಿಗಳ ಪೈಕಿ 167 ಕಂಪನಿಗಳು ಮುಂಬೈನಲ್ಲಿ ನೆಲೆ ಕಂಡುಕೊಂಡಿವೆ. ಬೆಂಗಳೂರು ಮತ್ತು ಚೆನ್ನೈನಲ್ಲಿ ಕ್ರಮವಾಗಿ 52 ಹಾಗೂ 38 ಕಂಪನಿಗಳು ಪ್ರಧಾನ ಕಚೇರಿ ಹೊಂದಿವೆ. ಟಾಪ್‌ 500 ಕಂಪನಿಗಳ ಪಟ್ಟಿಯಲ್ಲಿ ಈ ಮೂರು ನಗರಗಳಲ್ಲಿ ಇರುವ ಕಂಪನಿಗಳ ಪ್ರಮಾಣ ಶೇಕಡ 50ಕ್ಕಿಂತ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.