ADVERTISEMENT

Fortune Global 500 List 2025: ರಿಲಯನ್ಸ್ ದೇಶದ ಅಗ್ರ ಕಂಪನಿ

ಪಿಟಿಐ
Published 30 ಜುಲೈ 2025, 13:12 IST
Last Updated 30 ಜುಲೈ 2025, 13:12 IST
ರಿಲಯನ್ಸ್ ಇಂಡಸ್ಟ್ರೀಸ್‌
ರಿಲಯನ್ಸ್ ಇಂಡಸ್ಟ್ರೀಸ್‌   

ನವದೆಹಲಿ: ಫಾರ್ಚೂನ್‌ ನಿಯತಕಾಲಿಕ ಪ್ರಕಟಿಸಿರುವ 2025ನೇ ಸಾಲಿನ ಜಗತ್ತಿನ ಪ್ರಮುಖ 500 ಕಂಪನಿಗಳ ಪಟ್ಟಿಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ ಭಾರತದ ಕಂಪನಿಗಳ ಪೈಕಿ ಅಗ್ರ ಸ್ಥಾನ ಉಳಿಸಿಕೊಂಡಿದೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ಸ್ಥಾನ ಇಳಿಕೆ ಕಂಡಿದೆ. 2024ರಲ್ಲಿ 86ನೇ ಸ್ಥಾನ ಪಡೆದಿದ್ದ ಕಂಪನಿಯು, ಈ ವರ್ಷ 88ನೇ ಸ್ಥಾನ ಪಡೆದಿದೆ. 2021ರಲ್ಲಿ 155ನೇ ಸ್ಥಾನ ಪಡೆದಿದ್ದ ಕಂಪನಿಯು, ನಾಲ್ಕು ವರ್ಷದಲ್ಲಿ 67 ಸ್ಥಾನ ಜಿಗಿತ ಕಂಡಿದೆ ಎಂದು ತಿಳಿಸಿದೆ.

ಅಮೆರಿಕದ ವಾಲ್‌ಮಾರ್ಟ್‌ ಕಂಪನಿಯು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ನಂತರ ಅಮೆಜಾನ್‌ ಇದೆ. ಮೊದಲ 10 ಕಂಪನಿಗಳ ಪೈಕಿ ಚೀನಾದ ಮೂರು ಕಂಪನಿಗಳಿವೆ. ಸೌದಿ ಆರಾಮ್ಕೊ 4 ಮತ್ತು ಆ್ಯಪಲ್‌ 8ನೇ ಸ್ಥಾನ ಪಡೆದಿವೆ.

ADVERTISEMENT

ಭಾರತದ 9 ಕಂಪನಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಪೈಕಿ ಐದು ಸರ್ಕಾರಿ ವಲಯದವು, ಉಳಿದ ನಾಲ್ಕು ಖಾಸಗಿ ವಲಯದವು.

ಭಾರತೀಯ ಜೀವ ವಿಮಾ ನಿಗಮ (95), ಇಂಡಿಯನ್ ಆಯಿಲ್‌ ಕಾರ್ಪೊರೇಷನ್ (127), ಎಸ್‌ಬಿಐ (163), ಎಚ್‌ಡಿಎಫ್‌ಸಿ ಬ್ಯಾಂಕ್‌ (258) ಮತ್ತು ಒಎನ್‌ಜಿಸಿ (181) ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಟಾಟಾ ಮೋಟರ್ಸ್ (283), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (285) ಮತ್ತು ಐಸಿಐಸಿಐ ಬ್ಯಾಂಕ್ (464) ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

2024–25ರ ಆರ್ಥಿಕ ವರ್ಷದಲ್ಲಿ ಕಂಪನಿಗಳ ಒಟ್ಟು ವರಮಾನ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. 2024ರ ಮಾರ್ಚ್‌ನಲ್ಲಿ ರೂಪಾಯಿ ಎದುರು ಡಾಲರ್ ಮೌಲ್ಯ ₹83.35 ಇತ್ತು. 2025ರ ಮಾರ್ಚ್ ವೇಳೆಗೆ ₹85.45 ಆಗಿತ್ತು. ರೂಪಾಯಿ ಮೌಲ್ಯ ಇಳಿಕೆಯು ರಿಲಯನ್ಸ್ ಕಂಪನಿ ವರಮಾನದ ಮೇಲೆ ಪರಿಣಾಮ ಬೀರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.