ಪ್ರಲ್ಹಾದ ಜೋಶಿ
–ಪಿಟಿಐ ಚಿತ್ರ
ನವದೆಹಲಿ: ‘ರೋಗ ನಿರೋಧಕ ತಳಿಗಳು ಮತ್ತು ಬೆಳೆ ಪದ್ಧತಿ ಕುರಿತ ಹೊಸ ಅನ್ವೇಷಣೆಗಳ ಬಗ್ಗೆ ಕಬ್ಬು ಬೆಳೆಯುವ ರಾಷ್ಟ್ರಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರೆ ಕಬ್ಬಿನ ಇಳುವರಿ ಹೆಚ್ಚಿಸಲು ಸಹಕಾರಿಯಾಗಲಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ.
ಮಂಗಳವಾರ ನಡೆದ ಅಂತರರಾಷ್ಟ್ರೀಯ ಸಕ್ಕರೆ ಸಂಸ್ಥೆಯ (ಐಎಸ್‌ಒ) 64ನೇ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬಿನ ಇಳುವರಿ ಹೆಚ್ಚಿಸಲು ಸಂಶೋಧನೆಗೂ ಒತ್ತು ನೀಡಬೇಕಿದೆ ಎಂದು ಪ್ರತಿಪಾದಿಸಿದರು.
‘ಐಎಸ್‌ಒ ಸದಸ್ಯ ರಾಷ್ಟ್ರಗಳು ಮಾಹಿತಿ ಹಂಚಿಕೊಳ್ಳಲು ಮುಂದಾಗಬೇಕಿದೆ. ಇದರಿಂದ ಇಳುವರಿ ಹೆಚ್ಚಳದ ಜೊತೆಗೆ ಸುಸ್ಥಿರ ಬೆಳೆ ಪದ್ಧತಿಗೆ ಉತ್ತೇಜನ ನೀಡಲು ನೆರವಾಗಲಿದೆ’ ಎಂದು ಹೇಳಿದರು.
ಸಕ್ಕರೆ ಉತ್ಪಾದನೆ ಪ್ರಕ್ರಿಯೆಯಲ್ಲಿ ಸುಧಾರಿತ ತಂತ್ರಜ್ಞಾನದ ಅಳವಡಿಕೆಯು ಬಹುಮುಖ್ಯ. ಇದರಿಂದ ತ್ಯಾಜ್ಯದ ಪ್ರಮಾಣ ಕಡಿಮೆಯಾಗಲಿದ್ದು, ಕೈಗಾರಿಕೆಗಳು ಉತ್ಪಾದನೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಭಾರತವು ಸಕ್ಕರೆ ಬಳಕೆಯಲ್ಲಿ ಅತಿದೊಡ್ಡ ದೇಶವಾಗಿದೆ. ಉತ್ಪಾದನೆಯಲ್ಲಿ ಎರಡನೇ ದೊಡ್ಡ ರಾಷ್ಟ್ರವಾಗಿದೆ. 10 ದಶಲಕ್ಷಕ್ಕೂ ಹೆಚ್ಚು ರೈತರು ಕಬ್ಬು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಲಯವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.