ADVERTISEMENT

ಮಾಸ್ಟರ್‌ಕಾರ್ಡ್‌ ಮೇಲೆ ಆರ್‌ಬಿಐ ನಿರ್ಬಂಧ: ವೀಸಾ ಜೊತೆ ಆರ್‌ಬಿಎಲ್‌ ಒಪ್ಪಂದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2021, 12:19 IST
Last Updated 15 ಜುಲೈ 2021, 12:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಕ್ರೆಡಿಟ್‌ ಕಾರ್ಡ್‌ಗಳಿಗಾಗಿ ವೀಸಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆರ್‌ಬಿಎಲ್‌ ಬ್ಯಾಂಕ್‌ ತಿಳಿಸಿದೆ.

ತಂತ್ರಜ್ಞಾನ ಸಮೀಕರಣಗೊಂಡ ಬಳಿಕ, ಎಂಟರಿಂದ ಹತ್ತು ವಾರಗಳಲ್ಲಿ ವೀಸಾ ನೆಟ್‌ವರ್ಕ್ ಅಡಿಯಲ್ಲಿ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಆರ್‌ಬಿಎಲ್‌ ನಿರ್ಧರಿಸಿದೆ.

ದೇಶದಲ್ಲಿ 'ಮಾಸ್ಟರ್‌ಕಾರ್ಡ್‌'ನ ಕ್ರೆಡಿಟ್‌, ಡೆಬಿಟ್‌ ಹಾಗೂ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ಹೊಸ ಗ್ರಾಹಕರಿಗೆ ವಿತರಿಸುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧಿಸಿದೆ. ಇದಾದ ಒಂದು ದಿನದ ಬಳಿಕ ಆರ್‌ಬಿಎಲ್‌ ಮತ್ತು ವೀಸಾ ಕಂಪನಿ ನಡುವಿನ ಒಪ್ಪಂದದ ಕುರಿತ ಮಾಹಿತಿ ಹೊರಬಿದ್ದಿದೆ.

ADVERTISEMENT

ದತ್ತಾಂಶ ಸಂಗ್ರಹ ನಿಯಮಗಳನ್ನು ಅನುಸರಿಸದ ಕಾರಣದಿಂದ ಮಾಸ್ಟರ್‌ಕಾರ್ಡ್‌ ಏಷ್ಯಾ ಪೆಸಿಫಿಕ್‌ ಮೇಲೆ ಆರ್‌ಬಿಐ ಬುಧವಾರ ನಿರ್ಬಂಧ ವಿಧಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಮಾಸ್ಟರ್‌ಕಾರ್ಡ್‌ ಗ್ರಾಹಕರಿಗೆ ಈ ಆದೇಶದಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

'ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹದಲ್ಲಿ ನಿರ್ದೇಶನಗಳ ಪಾಲನೆಯಾಗಿಲ್ಲ. ಸಾಕಷ್ಟು ಸಮಯ ಮತ್ತು ಅವಕಾಶಗಳನ್ನು ನೀಡಿದ್ದರೂ ಸಂಸ್ಥೆಯು ಸೂಕ್ತ ಕ್ರಮಕೈಗೊಂಡಿಲ್ಲ' ಎಂದು ಆರ್‌ಬಿಐ ಹೇಳಿದೆ.

ಹೊಸ ಗ್ರಾಹಕರ ಸೇರ್ಪಡೆಗೆ ಜುಲೈ 22ರಿಂದ ಆರ್‌ಬಿಐ ನಿರ್ಬಂಧಗಳು ಅನ್ವಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.