ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ನವೆಂಬರ್ ತಿಂಗಳಲ್ಲಿ ಶೇ 5.48ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಗುರುವಾರ ತಿಳಿಸಿದೆ.
ತರಕಾರಿಗಳು ಸೇರಿದಂತೆ ಆಹಾರ ಪದಾರ್ಥಗಳ ದರ ಕಡಿಮೆಯಾಗಿದ್ದರಿಂದ ಹಣದುಬ್ಬರವು ಇಳಿಕೆಯಾಗಿದೆ ಎಂದು ಹೇಳಿದೆ.
ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 6.2 ದಾಖಲಾಗಿತ್ತು. ಇದು ಎರಡು ವರ್ಷದ ಕನಿಷ್ಠ ಮಟ್ಟವಾಗಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಶೇ 5.5ರಷ್ಟಿತ್ತು. ತರಕಾರಿಗಳು, ಬೇಳೆಕಾಳುಗಳು, ಸಕ್ಕರೆ, ಹಣ್ಣುಗಳು, ಮೊಟ್ಟೆ, ಹಾಲು, ಮಸಾಲೆ ಪದಾರ್ಥಗಳು, ಸಾರಿಗೆ, ಸಂವಹನ, ವೈಯಕ್ತಿಕ ಆರೈಕೆ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದರಿಂದ ಹಣದುಬ್ಬರದಲ್ಲಿ ಇಳಿಕೆಯಾಗಿದೆ ಕಡಿಮೆಯಾಗಿದೆ ಎಂದು ಎನ್‌ಎಸ್‌ಒ ಹೇಳಿದೆ.
ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ 10.87ರಷ್ಟಿತ್ತು. ಇದು ನವೆಂಬರ್‌ನಲ್ಲಿ ಶೇ 9.04ಕ್ಕೆ ಇಳಿದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಶೇ 8.70ರಷ್ಟಿತ್ತು.
ಈ ವರ್ಷದ ನವೆಂಬರ್ ತಿಂಗಳಲ್ಲಿ ಬೆಳ್ಳುಳ್ಳಿ (ಶೇ 85.14), ಆಲೂಗೆಡ್ಡೆ (ಶೇ 66.65), ಹೂಕೋಸು (ಶೇ 47.7), ಎಲೆಕೋಸು (ಶೇ 43.58) ಮತ್ತು ತೆಂಗಿನ ಎಣ್ಣೆ (ಶೇ 42.13) ಅತಿ ಹೆಚ್ಚು ಬೆಲೆಯನ್ನು ಹೊಂದಿದ್ದವು.
ಈಗ ಹಣದುಬ್ಬರದಲ್ಲಿ ಇಳಿಕೆಯಾಗಿರುವುದರಿಂದ ಆರ್‌ಬಿಐನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ರೆಪೊ ದರ ನಿಗದಿ ಸಮಿತಿ ಸಭೆಯು ದರ ಕಡಿತದ ಬಗ್ಗೆ ಯೋಚಿಸಲು ಅವಕಾಶ ನೀಡಿದೆ.
ಸಿಪಿಐ ಹಣದುಬ್ಬರವು ಗ್ರಾಮೀಣ ಪ್ರದೇಶದಲ್ಲಿ ಶೇ 5.95 ಮತ್ತು ನಗರದ ಪ್ರದೇಶದಲ್ಲಿ ಶೇ 4.83ರಷ್ಟಿದೆ. ರಾಜ್ಯಗಳ ಪೈಕಿ ಹಣದುಬ್ಬರ ಛತ್ತೀಸಗಢದಲ್ಲಿ ಅತಿಹೆಚ್ಚು ಶೇ 8.39ರಷ್ಟಿದ್ದರೆ, ದೆಹಲಿಯಲ್ಲಿ ಶೇ 2.65ರಷ್ಟು ಕಡಿಮೆ ಇದೆ ಎಂದು ವರದಿ ಹೇಳಿದೆ.
ದೇಶದ ಹಣದುಬ್ಬರವನ್ನು ಶೇ 4ರಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಆರ್‌ಬಿಐಗೆ ಸೂಚಿಸಿದೆ. ಆರ್‌ಬಿಐಯು ರೆಪೊ ದರವನ್ನು ಸತತ 11ನೇ ಬಾರಿ ಶೇ 6.5ರಲ್ಲಿ ಉಳಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.