ADVERTISEMENT

ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಬ್ಸಿಡಿ ಹೆಚ್ಚಳ

ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ತಯಾರಕ ಕಂಪನಿಗಳು

ಪಿಟಿಐ
Published 12 ಜೂನ್ 2021, 12:11 IST
Last Updated 12 ಜೂನ್ 2021, 12:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉತ್ತೇಜಿಸುವ 2ನೇ ಹಂತದ ಯೋಜನೆಯಲ್ಲಿ (ಫೇಮ್‌–2) ದ್ಚಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಶೇಕಡ 50ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಂಪನಿಗಳು ಸ್ವಾಗತಿಸಿವೆ. ಇದು ಮಹತ್ವದ ನಿರ್ಧಾರ ಎಂದು ಕಂಪನಿಗಳು ಅಭಿಪ್ರಾಯಪಟ್ಟಿವೆ.

ಕೇಂದ್ರ ಸರ್ಕಾರವು ಶುಕ್ರವಾರಫೇಮ್‌–2 ಯೋಜನೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿದೆ. ಈ ಮೊದಲು ಎಲ್ಲಾ ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ (per KWh) ₹ 10 ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿತ್ತು. ಇದೀಗ ದ್ವಿಚಕ್ರವಾಹನಗಳಿಗೆ ಪ್ರತಿ ಕೆಡಬ್ಲ್ಯುಎಚ್‌ಗೆ (per KWh)) ₹ 15 ಸಾವಿರ ಸಬ್ಸಿಡಿ ನಿಗದಿ ಮಾಡಲಾಗಿದೆ.

ಬೃಹತ್‌ ಉದ್ದಿಮೆಗಳ ಇಲಾಖೆಯು ಈಚೆಗೆ ತಂದಿರುವ ಬದಲಾವಣೆಯ ಪ್ರಕಾರ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡುವ ಆರ್ಥಿಕ ಉತ್ತೇನ ಮೊತ್ತವನ್ನು ವಾಹನಗಳ ಒಟ್ಟು ವೆಚ್ಚದ ಶೇ 40ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ಇದು ಶೇ 20ರಷ್ಟಿತ್ತು.

ADVERTISEMENT

‘ಕೋವಿಡ್‌ ಸಾಂಕ್ರಾಮಿಕದ ಹೊರತಾಗಿಯೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರಾಟ ಬೆಳವಣಿಗೆ ಕಂಡಿದೆ. ಸಬ್ಸಿಡಿಯನ್ನು ಶೇ 50ರಷ್ಟು ಹೆಚ್ಚಿಸುವ ಕೇಂದ್ರದ ನಿರ್ಧಾರದಿಂದ ಮಾರಾಟವು ಇನ್ನಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. 2025ರ ವೇಳೆಗೆ 60 ಲಕ್ಷಕ್ಕೂ ಹೆಚ್ಚಿನ ವಾಹನಗಳ ಮಾರಾಟದ ಗುರಿ ತಲುಪುವ ಅಂದಾಜು ಇದೆ’ ಎಂದು ಏಥರ್‌ ಎನರ್ಜಿ ಕಂಪನಿಯ ಸಹ ಸ್ಥಾಪಕ ತರುಣ್‌ ಮೆಹ್ತಾ ಹೇಳಿದ್ದಾರೆ.

‘ಕೇಂದ್ರದ ನಿರ್ಧಾರದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬೆಲೆಯು ಪೆಟ್ರೋಲ್ ಎಂಜಿನ್‌ ವಾಹನಗಳ ಆಸುಪಾಸಿಗೆ ಇಳಿಕೆ ಆಗಲಿದೆ’ ಎಂದುವಿದ್ಯುತ್‌ ಚಾಲಿತ ವಾಹನಗಳ ತಯಾರಕರ ಸಂಘದ (ಎಸ್‌ಎಂಇವಿ) ಪ್ರಧಾನ ನಿರ್ದೇಶಕ ಸೋಹಿಂದರ್‌ ಗಿಲ್‌ ಅಭಿಪ್ರಾಯಪಟ್ಟಿದ್ದಾರೆ.

‘ನಗರ ಪ್ರದೇಶದಲ್ಲಿ ಬಳಸುವ ವಿದ್ಯುತ್ ಚಾಲಿತ ಸ್ಕೂಟರ್‌ ಬೆಲೆಯು ₹ 60 ಸಾವಿರಕ್ಕಿಂತಲೂ ಕಡಿಮೆ ಆಗಲಿದ್ದು, ಗರಿಷ್ಠ ವೇಗದ ಸ್ಕೂಟರ್‌ಗಳ ಬೆಲೆಯು ₹ 1 ಲಕ್ಷದ ಸಮೀಪಕ್ಕೆ ಬರಲಿದೆ’ ಎಂದು ಅವರು ವಿವರಿಸಿದ್ದಾರೆ.

ಕೇಂದ್ರದ ನಿರ್ಧಾರದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬಳಕೆಗೆ ವೇಗ ಸಿಗಲಿದೆ ಎಂದು ರೆವೋಲ್ಟ್‌, ಓಕಿನೋವಾ ಕಂಪನಿಗಳು ಸಹ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.