ADVERTISEMENT

ರೊಬಸ್ಟಾ ಕಾಫಿ: ಮೂಟೆಗೆ ₹10 ಸಾವಿರ ದರ ಏರಿಕೆ

ರವಿ ಕೆಳಂಗಡಿ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ರೊಬಸ್ಟಾ ಕಾಫಿ ಗಿಡ 
ರೊಬಸ್ಟಾ ಕಾಫಿ ಗಿಡ    

ಕಳಸ (ಚಿಕ್ಕಮಗಳೂರು ಜಿಲ್ಲೆ): ರೊಬಸ್ಟಾ ಕಾಫಿ ದರವು ಏರುಗತಿಯಲ್ಲೇ ಸಾಗಿದ್ದು, ಹೊಸ ದಾಖಲೆ ಬರೆಯುತ್ತಿದೆ. ಇದರಿಂದ ಬೆಳೆಗಾರರಲ್ಲಿ ಕಾಫಿ ಕೃಷಿ ಬಗ್ಗೆ ಹೊಸ ಹುಮ್ಮಸ್ಸು ಮೂಡುತ್ತಿದೆ.

ಶನಿವಾರ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಬೆಲೆಯು ಪ್ರತಿ ಟನ್‍ಗೆ 3,852 ಡಾಲರ್‌ಗೆ ಏರಿಕೆ ಆಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಪೌಂಡ್ ಅರೇಬಿಕಾ ಕಾಫಿ ಬೆಳೆ 277 ಸೆಂಟ್ಸ್‌ಗೆ ಏರಿಕೆ ಆಗಿದ್ದು, ಇದು ಕಳೆದ ಎಂಟು ತಿಂಗಳ ಗರಿಷ್ಠ ಮಟ್ಟವಾಗಿದೆ.

ರೊಬಸ್ಟಾ ಕಾಫಿ ದರ ಕೆ.ಜಿಗೆ ₹375ಕ್ಕೆ ಏರಿಕೆಯಾಗಿದ್ದರೆ, ಅರೇಬಿಕಾ ಕಾಫಿ ಕೂಡ ಕೆ.ಜಿಗೆ ₹320ಕ್ಕೆ ತಲುಪಿದೆ. ಹಾಗಾಗಿ, 50 ಕೆ.ಜಿ ತೂಕದ ರೊಬಸ್ಟಾ ಕಾಫಿ ಚೀಲಕ್ಕೆ ₹10 ಸಾವಿರ ಧಾರಣೆ ಸಿಗುತ್ತಿದೆ.

ADVERTISEMENT

ಮೂರು ವರ್ಷದ ಹಿಂದೆ ರೊಬಸ್ಟಾ ಕಾಫಿ ಮೂಟೆಗೆ ₹3,500 ದರ ಇತ್ತು. ನಮ್ಮ ಜೀವನದಲ್ಲೇ ಕಾಫಿಗೆ ಇಂತಹ ಬೆಲೆ ಬರುತ್ತದೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಬೆಳೆಗಾರರು ಅಚ್ಚರಿ  ವ್ಯಕ್ತಪಡಿಸುತ್ತಾರೆ.

ರೊಬಸ್ಟಾ ಕಾಫಿಯನ್ನು ಅಧಿಕವಾಗಿ ಉತ್ಪಾದನೆ ಮಾಡುವ ವಿಯೆಟ್ನಾಂ ದೇಶದಲ್ಲಿ ಒಣಹವೆಯಿಂದ ಉತ್ಪಾದನೆ ಕುಸಿದಿದೆ. ಈಗಾಗಲೇ ಶೇ 20ಕ್ಕೂ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ರೊಬಸ್ಟಾಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕುದುರಿದೆ ಎನ್ನುತ್ತಾರೆ ವರ್ತಕರು.

ಬಹುತೇಕ ಬೆಳೆಗಾರರು ಈಗಾಗಲೇ ₹7,500ರಿಂದ ₹8,000ಕ್ಕೆ ಕಾಫಿಯನ್ನು ಮಾರಾಟ ಮಾಡಿದ್ದಾರೆ. ಉಳಿದ ಬೆಳೆಗಾರರು ಇನ್ನಷ್ಟು ಬೆಲೆ ಏರುವ ನಿರೀಕ್ಷೆಯಿಂದ ಮಾರಾಟ ಮಾಡದೆ ಉಳಿಸಿಕೊಂಡಿದ್ದಾರೆ. ಮಳೆ ಕಾರಣದಿಂದ ಬ್ರೆಜಿಲ್‌ನಲ್ಲೂ ಅರೇಬಿಕಾ ಕಾಫಿಗೆ ಹಾನಿ ಆಗುತ್ತಿದೆ. ಇದರಿಂದ ಮುಂದಿನ ಫಸಲು ಕಡಿಮೆ ಆಗುವ ಆತಂಕ ಇದೆ. ಇದರಿಂದ ಅರೇಬಿಕಾ ಬೆಲೆ ಕೂಡ ಏರಿಕೆಯ ಹಾದಿ ಹಿಡಿದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.