ಮುಂಬೈ: ಅಮೆರಿಕ ಡಾಲರ್ ಸೂಚ್ಯಂಕದ ಚೇತರಿಕೆ, ವಿದೇಶಿ ಬಂಡವಾಳದ ಒಳಹರಿವು ಕಡಿತ ಮತ್ತು ದೇಶೀಯ ಷೇರುಪೇಟೆಗಳ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಮಂಗಳವಾರ ಅಂತರರಾಷ್ಟ್ರೀಯ ವಿನಿಮಯದಲ್ಲಿ ಭಾರತದ ರೂಪಾಯಿ ಮೌಲ್ಯ 27 ಪೈಸೆಯಷ್ಟು ಕುಸಿದು ₹85.37ಕ್ಕೆ ತಲುಪಿತು.
ಏಪ್ರಿಲ್ ತಿಂಗಳ ದೇಶೀಯ ಕೈಗಾರಿಕಾ ಮತ್ತು ಉತ್ಪಾದನಾ ಉತ್ಪಾದನಾ ದತ್ತಾಂಶ ಹಾಗೂ ಈ ವಾರ ಬಿಡುಗಡೆಯಾಗಲಿರುವ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿಗಳಿಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ 85.15ರಲ್ಲಿ ಆರಂಭವಾಗಿ ದಿನದ ವಹಿವಾಟಿನಲ್ಲಿ ಗರಿಷ್ಠ ₹85.11 ಮತ್ತು ಕನಿಷ್ಠ ₹85.45ರ ನಡುವೆ ವ್ಯವಹಾರ ನಡೆಸಿತು. ಅಂತಿಮವಾಗಿ 27 ಪೈಸೆ ನಷ್ಟದೊಂದಿಗೆ ₹85.37ಕ್ಕೆ ಸ್ಥಿರಗೊಂಡಿತು.
ಶುಕ್ರವಾರ ಅಮೆರಿಕ ಡಾಲರ್ ಎದುರು 50 ಪೈಸೆ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯ, ಸೋಮವಾರ 35 ಪೈಸೆ ಏರಿಕೆಯಾಗಿ 85.10ಕ್ಕೆ ಮುಕ್ತಾಯಗೊಂಡಿತ್ತು.
ದುರ್ಬಲ ದೇಶೀಯ ಷೇರುಗಳು ಮತ್ತು ಸಕಾರಾತ್ಮಕ ಅಮೆರಿಕ ಡಾಲರ್ ಸೂಚ್ಯಂಕದಿಂದಾಗಿ ರೂಪಾಯಿ ಮೌಲ್ಯ ಕುಸಿದಿದೆ ಎಂದು ಮಿರೇ ಅಸೆಟ್ ಶೇರ್‌ಖಾನ್‌ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ. ವಿದೇಶಿ ಒಳಹರಿವು ಕಡಿತ ಕೂಡ ರೂಪಾಯಿಯ ಮೇಲೆ ಪರಿಣಾಮ ಬೀರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.