ADVERTISEMENT

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ: ಇಲ್ಲಿದೆ ಕಾರಣ

ಪಿಟಿಐ
Published 9 ಜನವರಿ 2026, 15:39 IST
Last Updated 9 ಜನವರಿ 2026, 15:39 IST
<div class="paragraphs"><p>ಡಾಲರ್‌ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ</p></div>

ಡಾಲರ್‌ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ

   

ಮುಂಬೈ: ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಮಧ್ಯೆ ವಿದೇಶಿ ನಿಧಿಯ ಹೊರಹರಿವು ಹೆಚ್ಚಾಗಿರುವುದರಿಂದ ಶುಕ್ರವಾರ ರೂಪಾಯಿ ಮೌಲ್ಯ 28 ಪೈಸೆ ಕುಸಿದು 90.18ಕ್ಕೆ ಸ್ಥಿರವಾಯಿತು.

ವಿದೇಶಿ ವ್ಯಾಪಾರಿಗಳ ಪ್ರಕಾರ, ಬಲವಾದ ಗ್ರೀನ್‌ಬ್ಯಾಕ್ ಮತ್ತು ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯು ಸ್ಥಳೀಯ ಕರೆನ್ಸಿ ಮೇಲೆ ಮತ್ತಷ್ಟು ಒತ್ತಡ ಹೇರುತ್ತಿದೆ.

ADVERTISEMENT

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 89.88ಕ್ಕೆ ಏರಿಕೆಯಾಗುವುದರೊಂದಿಗೆ ವಹಿವಾಟು ಆರಂಭಿಸಿತ್ತು. ಆದರೆ, ದಿನವಿಡೀ ಕುಸಿತ ಕಂಡು ಅಮೆರಿಕ ಡಾಲರ್ ಎದುರು 90.18ಕ್ಕೆ ಸ್ಥಿರವಾಯಿತು. ಹಿಂದಿನ ದಿನಕ್ಕಿಂತ 28 ಪೈಸೆ ಹೆಚ್ಚು ಕುಸಿಯಿತು. ದಿನದಲ್ಲಿ ರೂಪಾಯಿ ಮೌಲ್ಯ 89.88 ಮತ್ತು 90.25ರ ನಡುವೆ ವಹಿವಾಟು ನಡೆಸಿತು.

ಗುರುವಾರ, ಡಾಲರ್ ಎದುರು ರೂಪಾಯಿ 3 ಪೈಸೆ ಇಳಿಕೆಯಾಗಿ 89.90ಕ್ಕೆ ಸ್ಥಿರವಾಗಿತ್ತು.

ಕಾರಣ ಏನು?

ರಷ್ಯಾದಿಂದ ತೈಲ ಖರೀದಿಸುತ್ತಿರುವ ದೇಶಗಳ ಮೇಲೆ ನಿರ್ಬಂಧ ವಿಧಿಸುವ ಕಾಯ್ದೆ ಪರವಾಗಿ ಟ್ರಂಪ್ ಒಲವು ತೋರಿದ್ದು, ಇದರನ್ವಯ ಭಾರತ, ಬ್ರೆಜಿಲ್ ಮತ್ತು ಚೀನಾ ದೇಶಗಳಿಗೆ ಶೇ 500ರಷ್ಟು ಸುಂಕ ವಿಧಿಸುವ ಅಧಿಕಾರ ಅಮೆರಿಕ ಅಧ್ಯಕ್ಷರಿಗೆ ಸಿಗಲಿದೆ. ಆ ಆತಂಕವು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.

'ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪರಿಣಾಮ ರೂಪಾಯಿ ಮೌಲ್ಯ ಕುಸಿತ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಮೆರಿಕ ಡಾಲರ್‌ನ ಬಲ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯು ರೂಪಾಯಿಯ ಮೇಲೆ ಒತ್ತಡ ಹೇರಬಹುದು. ಎಫ್‌ಐಐ ಹೊರಹರಿವು ಕೂಡ ಒತ್ತಡಕ್ಕೆ ಕಾರಣವಾಗಬಹುದು. ಆದಾಗ್ಯೂ, ರಿಸರ್ವ್ ಬ್ಯಾಂಕಿನ ಮಧ್ಯಪ್ರವೇಶವು ರೂಪಾಯಿಯನ್ನು ಬೆಂಬಲಿಸಬಹುದು’ಎಂದು ಮಿರೇ ಅಸೆಟ್ ಶೇರ್‌ಖಾನ್‌ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.

ದೇಶೀಯ ಈಕ್ವಿಟಿ ಮಾರುಕಟ್ಟೆಗಳ ಪೈಕಿ, ಬಿಎಸ್‌ಇ ಸೆನ್ಸೆಕ್ಸ್ 604.72 ಅಂಶ ಕುಸಿದು 83,576.24ರಲ್ಲಿ ಸ್ಥಿರಗೊಂಡರೆ, ನಿಫ್ಟಿ 193.55 ಅಂಶ ಕುಸಿದು 25,683ರಲ್ಲಿ ವಹಿವಾಟು ಮುಗಿಸಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ₹3,769.31 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.