ನವದೆಹಲಿ: ಭಾರತಕ್ಕೆ ಕಚ್ಚಾ ತೈಲ ಪೂರೈಸುವ ರಾಷ್ಟ್ರಗಳ ಸಾಲಿನಲ್ಲಿ ರಷ್ಯಾ ಮುಂದಿನ ದಿನಗಳಲ್ಲಿಯೂ ಮೊದಲ ಸ್ಥಾನದಲ್ಲಿ ಇರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ. ರಷ್ಯಾದಿಂದ ತೈಲ ಖರೀದಿಸುವುದರ ವಿಚಾರವಾಗಿ ಅಮೆರಿಕ ಹೇರಿರುವ ಒತ್ತಡದ ನಡುವೆಯೂ ದೇಶದ ಒಟ್ಟು ತೈಲ ಖರೀದಿಯಲ್ಲಿ ರಷ್ಯಾದ ಪಾಲು ಮೂರನೇ ಒಂದು ಭಾಗದಷ್ಟಿದೆ.
ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಪ್ರತಿ ದಿನ ಅಂದಾಜು 47 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ಭಾರತ ಖರೀದಿಸಿದೆ. ರಷ್ಯಾದಿಂದ 16 ಲಕ್ಷ ಬ್ಯಾರೆಲ್ ಖರೀದಿಸಿದೆ. ಇದು ಒಟ್ಟು ಖರೀದಿಯಲ್ಲಿ ಶೇ 34ರಷ್ಟಾಗಿದೆ. ಇರಾಕ್‌ನಿಂದ 8.81 ಲಕ್ಷ ಬ್ಯಾರೆಲ್, ಸೌದಿ ಅರೇಬಿಯಾ 6.03 ಲಕ್ಷ ಬ್ಯಾರೆಲ್, ಯುಎಇಯಿಂದ 5.94 ಲಕ್ಷ ಬ್ಯಾರೆಲ್ ಮತ್ತು ಅಮೆರಿಕದಿಂದ ನಿತ್ಯ 2.06 ಲಕ್ಷ ಬ್ಯಾರೆಲ್ ಖರೀದಿಸುತ್ತಿದೆ.
2022ರಲ್ಲಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸುವ ಮೊದಲು ಭಾರತವು ರಷ್ಯಾದಿಂದ ಖರೀದಿಸುವ ತೈಲದ ಪ್ರಮಾಣವು ಒಟ್ಟು ಖರೀದಿಯ ಶೇ 1ರಷ್ಟು ಮಾತ್ರ ಆಗಿತ್ತು. ಅದು ಈಗ ಶೇ 40ಕ್ಕೆ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.