ಕಚ್ಚಾ ತೈಲ
ನವದೆಹಲಿ: ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಬಳಕೆದಾರರಾಗಿರುವ ಭಾರತದ ತೈಲ ಸಂಸ್ಕರಣಾ ಕಂಪನಿಗಳು, ಅಲ್ಲಿಂದ ಕಚ್ಚಾ ತೈಲ ಖರೀದಿಸದೆಯೂ ತಮ್ಮ ವಹಿವಾಟು ಮುಂದುವರಿಸುವುದು ತಾಂತ್ರಿಕವಾಗಿ ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಹೀಗೆ ಮಾಡುವ ಮೊದಲು ಅವು ಆರ್ಥಿಕವಾಗಿ ಬಹಳಷ್ಟು ಹೊಂದಾಣಿಕೆಗಳಿಗೆ ಸಿದ್ಧವಾಗಬೇಕಿದೆ.
ರಷ್ಯಾದ ಕಚ್ಚಾ ತೈಲವನ್ನು ಸಂಸ್ಕರಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್‌ನಂತಹ ಇಂಧನ ಲಭ್ಯವಾಗುತ್ತದೆ. ಭಾರತದ ಸಂಸ್ಕರಣಾ ಕಂಪನಿಗಳು ಖರೀದಿಸುತ್ತಿರುವ ಒಟ್ಟು ಕಚ್ಚಾ ತೈಲದಲ್ಲಿ ರಷ್ಯಾದ ಕಚ್ಚಾ ತೈಲದ ಪಾಲು ಶೇ 38ರಷ್ಟು ಇದೆ. ಇದರ ಬದಲು ಬೇರೆಡೆಗಳಿಂದ ಕಚ್ಚಾ ತೈಲ ಖರೀದಿಸಿದರೆ ಸಂಸ್ಕರಣೆಯ ನಂತರ ಸಿಗುವ ಇಂಧನದ ಪ್ರಮಾಣ ಕಡಿಮೆ ಆಗುತ್ತದೆ ಎಂದು ಕೆಪ್ಲರ್ ಸಂಸ್ಥೆ ಹೇಳಿದೆ.
ಜುಲೈ ತಿಂಗಳಲ್ಲಿ ಭಾರತವು ರಷ್ಯಾದಿಂದ ಪ್ರತಿದಿನ 16 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ದೊಡ್ಡ ಮಟ್ಟದ ರಿಯಾಯಿತಿ ಹಾಗೂ ಭಾರತದ ಸಂಸ್ಕರಣಾ ವ್ಯವಸ್ಥೆಗೆ ಸರಿಹೊಂದುವ ಕಾರಣದಿಂದಾಗಿ ರಷ್ಯಾದಿಂದ ಉರಲ್ ಕಚ್ಚಾ ತೈಲವನ್ನು ಖರೀದಿಸುವುದು ಹೆಚ್ಚಳ ಕಂಡಿದೆ ಎಂದು ಕೆಪ್ಲರ್ ವರದಿಯು ತಿಳಿಸಿದೆ.
‘ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿರುವ ದತ್ತಾಂಶದ ಪ್ರಕಾರ, ಬೇರೆಡೆಗಳಿಂದ ಖರೀದಿಸುವ ಕಚ್ಚಾ ತೈಲದ ಬೆಲೆಯು ರಷ್ಯಾದಿಂದ ಖರೀದಿಸಿರುವ ಕಚ್ಚಾ ತೈಲದ ಬೆಲೆಗಿಂತ ಬ್ಯಾರೆಲ್‌ಗೆ 5 ಡಾಲರ್‌ನಷ್ಟು ಹೆಚ್ಚು. ರಷ್ಯಾದ ಬದಲು ಪ್ರತಿದಿನ 18 ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ಬೇರೆ ಮೂಲಗಳಿಂದ ಖರೀದಿಸಿದರೆ ವಾರ್ಷಿಕ ಗರಿಷ್ಠ 5 ಬಿಲಿಯನ್ ಡಾಲರ್ (ಅಂದಾಜು ₹43 ಸಾವಿರ ಕೋಟಿ) ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ’ ಎಂದು ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.