ADVERTISEMENT

ರಷ್ಯಾದಿಂದ ಕಚ್ಚಾ ತೈಲ | ರಿಯಾಯಿತಿ ಇದ್ದರೂ ಲಾಭ ಕಡಿಮೆ: ವರದಿ

ಪಿಟಿಐ
Published 28 ಆಗಸ್ಟ್ 2025, 14:21 IST
Last Updated 28 ಆಗಸ್ಟ್ 2025, 14:21 IST
ಕಚ್ಚಾ ತೈಲ
ಕಚ್ಚಾ ತೈಲ   

ನವದೆಹಲಿ: ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರತ ಖರೀದಿಸುವ ಕಚ್ಚಾ ತೈಲದಿಂದ ವಾರ್ಷಿಕ ಅಂದಾಜು ಸುಮಾರು ₹22,000 ಕೋಟಿ ಮಾತ್ರ ಲಾಭವಾಗಲಿದೆ ಎಂದು ಬ್ರೋಕರೇಜ್‌ ಸಂಸ್ಥೆ ಸಿಎಲ್‌ಎಸ್‌ಎ ವರದಿ ತಿಳಿಸಿದೆ.

ಕೆಲ ಮಾಧ್ಯಮಗಳು ಭಾರತವು, ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದರೆ ವಾರ್ಷಿಕ ಸುಮಾರು ₹90,000 ಕೋಟಿಯಿಂದ ₹2.19 ಲಕ್ಷ ಕೋಟಿವರೆಗೆ ಲಾಭವಾಗಲಿದೆ ಎಂದು ಅಂದಾಜಿಸಿವೆ. ಆದರೆ,  ಲೆಕ್ಕ ಹಾಕಿದಾಗ ದೊರೆಯುವುದು ₹22,000 ಕೋಟಿ ಮಾತ್ರ. ಇದು ದೇಶದ ಜಿಡಿಪಿಯ ಶೇ 0.6ರಷ್ಟು ಮಾತ್ರ ಎಂದು ತಿಳಿಸಿದೆ. 

ರಷ್ಯಾ ನೀಡುತ್ತಿರುವ ರಿಯಾಯಿತಿಯು ಗಣನೀಯವಾಗಿ ಕಂಡರೂ ಭಾರತದ ಕಚ್ಚಾ ತೈಲ ಆಮದುದಾರರಿಗೆ ದೊಡ್ಡ ಮಟ್ಟದ ಲಾಭ ಆಗುತ್ತಿಲ್ಲ. ರಷ್ಯಾದ ಕಚ್ಚಾ ತೈಲದ ಮೇಲೆ ಸಾಗಾಟ, ವಿಮೆ, ಮರುವಿಮೆಯಂತಹ ಹಲವು ನಿರ್ಬಂಧಗಳು ಇವೆ. ಹಾಗಾಗಿ ಭಾರತದ ಆಮದುದಾರರು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಹಾಗಾಗಿ ರಿಯಾಯಿತಿಯಿಂದ ದೊಡ್ಡ ಮಟ್ಟದ ಲಾಭ ಆಗುತ್ತಿಲ್ಲ ಎಂದು ಸಿಎಲ್‌ಎಸ್‌ಎ ಹೇಳಿದೆ.

ADVERTISEMENT

ಭಾರತೀಯ ತೈಲ ಕಂಪನಿಗಳು ರಷ್ಯಾದಿಂದ ಆಮದಾಗುವ ಕಚ್ಚಾ ತೈಲದಿಂದ 2023–24ರಲ್ಲಿ ಪ್ರತೀ ಬ್ಯಾರೆಲ್‌ಗೆ 8.5 ಡಾಲರ್ ರಿಯಾಯಿತಿ ಪಡೆಯುತ್ತಿದ್ದವು. 2025ರಲ್ಲಿ 3ರಿಂದ 5 ಡಾಲರ್‌ಗೆ ಇಳಿದಿದೆ. ಇತ್ತೀಚಿನ ದಿನಗಳಲ್ಲಿ 1.5 ಡಾಲರ್‌ಗೆ ಇಳಿದಿದೆ ಎಂದು ತಿಳಿಸಿದೆ. 

ಭಾರತವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 90 ಡಾಲರ್‌ನಿಂದ 100 ಡಾಲರ್‌ಗಳಿಗೆ ಏರಬಹುದು ಎಂದು ಹೇಳಿದೆ.

ಉಕ್ರೇನ್ ಯುದ್ಧದ ಬಳಿಕ ಭಾರತಕ್ಕೆ ಆಮದಾಗುವ ರಷ್ಯಾದ ತೈಲ ಪ್ರಮಾಣ, ಶೇ 1ರಿಂದ ಶೇ 40ಕ್ಕೆ ಏರಿದೆ. ಪ್ರತೀ ದಿನ ಭಾರತ 54 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ರಷ್ಯಾದ ಪಾಲು ಶೇ 36ರಷ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.