ನವದೆಹಲಿ: ರಷ್ಯಾದಿಂದ ತೈಲ ಖರೀದಿ ಮುಂದುವರಿಸಲು ಅಥವಾ ನಿಲ್ಲಿಸಲು ಕೇಂದ್ರ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ ಎಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಶುಕ್ರವಾರ ತಿಳಿಸಿದೆ.
ಆರ್ಥಿಕ ಅಂಶಗಳನ್ನು ಪರಿಗಣಿಸಿ ತೈಲ ಖರೀದಿಸುವ ಸ್ವಾತಂತ್ರ್ಯವನ್ನು ಸರ್ಕಾರ ನೀಡಿದೆ ಎಂದು ಎಚ್‌ಪಿಸಿಎಲ್ ಅಧ್ಯಕ್ಷ ವಿಕಾಸ್ ಕೌಶಲ್ ಶುಕ್ರವಾರ ತಿಳಿಸಿದ್ದಾರೆ.
ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಆಗಿ ಸಂಸ್ಕರಿಸಿದ ಒಟ್ಟು ಕಚ್ಚಾ ತೈಲದಲ್ಲಿ, ರಷ್ಯಾದ ಪಾಲು ಶೇ 13.2ರಷ್ಟಿದೆ. ರಷ್ಯಾದಿಂದ ಸಂಪೂರ್ಣವಾಗಿ ಕಚ್ಚಾ ತೈಲ ಆಮದು ನಿಲ್ಲಿಸಿದರೂ, ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಲ್ಲ ಎಂದು ತಿಳಿಸಿದ್ದಾರೆ.
ಜುಲೈನಲ್ಲಿ ಪ್ರತಿ ದಿನ 16 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಸುವ ಮೂಲಕ ಭಾರತವು, ರಷ್ಯಾದ ಅತಿದೊಡ್ಡ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶವಾಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್‌ಗೆ ತೈಲ ಖರೀದಿ ಸಂಬಂಧ ಯಾವುದೇ ಕಾರ್ಯಾದೇಶ ನೀಡಿಲ್ಲ. ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 66 ಲಕ್ಷ ಟನ್ ಕಚ್ಚಾ ತೈಲವನ್ನು ಸಂಸ್ಕರಣೆ ಮಾಡಿತ್ತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.