ADVERTISEMENT

ಸ್ಯಾಮ್ಸಂಗ್‌ ನೌಕರರ ಹೋರಾಟ: ಸರ್ಕಾರದ ಮಧ್ಯಪ್ರವೇಶಕ್ಕೆ ಕೋರಿಕೆ

ಪಿಟಿಐ
Published 20 ಫೆಬ್ರುವರಿ 2025, 16:05 IST
Last Updated 20 ಫೆಬ್ರುವರಿ 2025, 16:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ಶ್ರೀಪೆರಂಬದೂರಿನಲ್ಲಿ ಇರುವ ಸ್ಯಾಮ್ಸಂಗ್‌ ಕಂಪನಿಯ ಘಟಕದಲ್ಲಿ ಸಿಐಟಿಯು ಬೆಂಬಲಿತ ಸ್ಯಾಮ್ಸಂಗ್‌ ಇಂಡಿಯಾ ನೌಕರರ ಒಕ್ಕೂಟದಿಂದ ನಡೆಯುತ್ತಿರುವ ಪ್ರತಿಭಟನೆಯು ಗುರುವಾರ ತೀವ್ರಗೊಂಡಿದೆ.

ಕಾರ್ಖಾನೆಯ ಕಾರ್ಯಾಚರಣೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಕೂಡಲೇ ಮಧ್ಯಪ್ರವೇಶಿಸುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಸ್ಯಾಮ್ಸಂಗ್‌ ಕಂಪನಿಯು ಮನವಿ ಮಾಡಿದೆ.

ಹೋರಾಟದಲ್ಲಿ ತೊಡಗಿದ್ದ ಮೂವರು ನೌಕರರನ್ನು ಕಂಪನಿಯು ಸೇವೆಯಿಂದ ಅಮಾನತುಗೊಳಿಸಿದೆ. ಇದನ್ನು ಖಂಡಿಸಿ ಕೆಲವು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ಕಂಪನಿಯು ಕಾರ್ಮಿಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ನಮ್ಮ ನೌಕರರ ಸುರಕ್ಷತೆ ಮುಖ್ಯವಾಗಿದೆ. ಕಂಪನಿಯಲ್ಲಿ ಶಿಸ್ತು ಕಾಪಾಡಿಕೊಂಡು ಸುಗಮವಾಗಿ ವ್ಯಾಪಾರ ವಹಿವಾಟು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರವು ಅಗತ್ಯ ಸಹಕಾರ ನೀಡಬೇಕು ಎಂದು ಪತ್ರದಲ್ಲಿ ಕೋರಿದೆ.

ನೌಕರರು ಕಂಪನಿಯ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ.

ಕಳೆದ ವರ್ಷ ಕಂಪನಿಯ ಇದೇ ಘಟಕದಲ್ಲಿ ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರ್ಕಾರದ ಮಧ್ಯಪ್ರವೇಶದಿಂದ ಹೋರಾಟವು ಸುಖಾಂತ್ಯ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.