ADVERTISEMENT

ತೈಲ ಬಿಕ್ಕಟ್ಟು: ಸಭೆ ಮುಂದೂಡಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಕುಸಿತ ನಿಯಂತ್ರಿಸುವ ಉದ್ದೇಶ

ಏಜೆನ್ಸೀಸ್
Published 4 ಏಪ್ರಿಲ್ 2020, 23:30 IST
Last Updated 4 ಏಪ್ರಿಲ್ 2020, 23:30 IST
   

ದುಬೈ:ತೈಲ ಮಾರುಕಟ್ಟೆಯಲ್ಲಿಸಮತೋಲನ ಕಾಯ್ದುಕೊಳ್ಳಲು ಸೋಮವಾರ ಕರೆದಿರುವ ತುರ್ತು ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ತೈಲ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೌದಿ ಅರೇಬಿಯಾ ನೇತೃತ್ವದಲ್ಲಿನ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ಅದರ ಮಿತ್ರ ದೇಶಗಳು ಸೋಮವಾರ ವಿಡಿಯೊ ಕಾನ್‌ಫೆರೆನ್ಸ್‌ ಮೂಲಕ ತುರ್ತು ಸಭೆ ನಡೆಸಬೇಕಿತ್ತು.

ಸಭೆ ಮುಂದೂಡಿರುವುದಾಗಿ ಒಪೆಕ್‌ ತಿಳಿಸಿದೆ. ಆದರೆ ಅದಕ್ಕೆ ಕಾರಣವೇನೆಂದು ಹೇಳಿಲ್ಲ ಎಂದು ಅಜರ್‌ಬೈಜಾನ್ ತಿಳಿಸಿದೆ.

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಸೌದಿ ದೊರೆ ಮಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಶುಕ್ರವಾರ ದೂರವಾಣಿ ಕರೆ ನಡೆಸಿದ ಬಳಿಕ ಸೌದಿ ತುರ್ತು ಸಭೆ ನಡೆಸುವ ನಿರ್ಧಾರಕ್ಕೆ ಬಂದಿದೆ. ಆದರೆ ಮುಂದಿನ ವಾರದ ಅಂತ್ಯದಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಉತ್ಪಾದನೆ ತಗ್ಗಿಸಲು ಸಹಕಾರ: ಪುಟಿನ್‌

ತೈಲಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ ಮತ್ತು ಅಮೆರಿಕದೊಂದಿಗೆ ಸಹಕರಿಸಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹೇಳಿದ್ದಾರೆ.

‘ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಮತ್ತು ಉತ್ಪಾದನೆ ತಗ್ಗಿಸಲು ಸಂಘಟಿತ ಪ್ರಯತ್ನದ ಅಗತ್ಯವಿದೆ ಎನ್ನುವುದನ್ನು ನಾನು ನಂಬಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಇಂಧನ ಸಚಿವ ಅಲೆಕ್ಸಾಂಡರ್‌ ನೋವಾಕ್‌ ಅವರೊಂದಿಗೆ ಕಾಲ್‌ ಕಾನ್ಫರೆನ್ಸ್‌ ನಡೆಸಿದ ಅವರು, ದಿನಕ್ಕೆ 1 ಕೋಟಿ ಬ್ಯಾರಲ್‌ಗಳಷ್ಟು ಉತ್ಪಾದನೆ ತಗ್ಗಿಸುವ ಕುರಿತು ತೈಲ ಉತ್ಪಾದನಾ ದೇಶಗಳೊಂದಿಗೆ ಚರ್ಚೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಸೌದಿ ಅರೇಬಿಯಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೂ ಮಾತುಕತೆ ನಡೆಸಿರುವುದಾಗಿ’ ತಿಳಿಸಿದ್ದಾರೆ.

ಮಾರ್ಚ್‌ನ ಮೊದಲ ವಾರದಲ್ಲಿ ನಡೆದ ಸಭೆಯಲ್ಲಿ ಉತ್ಪಾದನೆ ಕಡಿತಗೊಳಿಸಲು ರಷ್ಯಾ ನಿರಾಕರಿಸಿದ್ದು, ಮೂರು ವರ್ಷಗಳ ಒಪ್ಪಂದ ಮಾರ್ಚ್‌ 31ಕ್ಕೆ ಕೊನೆಗೊಂಡಿದೆ. ಇದರಿಂದಾಗಿ ರಷ್ಯಾದ ಮಾರುಕಟ್ಟೆಯನ್ನು ಕಸಿದುಕೊಳ್ಳಲುಸೌದಿ ಅರೇಬಿಯಾ ದೇಶವು ಕಡಿಮೆ ಬೆಲೆಗೆ ಹೆಚ್ಚಿನ ತೈಲ ಪೂರೈಕೆ ಮಾಡುವ ಮೂಲಕ ದರ ಸಮರ ಆರಂಭಿಸಿದೆ.

ಇದೀಗ ಕೊರೊನಾದಿಂದಾಗಿ ಜಗತ್ತಿನಾದ್ಯಂತ ಲಾಕ್‌ಡೌನ್‌ ವಿಧಿಸಿರುವುದು ವಿಮಾನವನ್ನೂ ಒಳಗೊಂಡು ಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಣೆ ಮೇಲೆ ಪರಿಣಾಮ ಬೀರಿದೆ. ಇದು ತೈಲ ಬೇಡಿಕೆಯನ್ನು ಇನ್ನಷ್ಟು ಕಡಿಮೆ ಮಾಡುತ್ತಿದೆ. ಆದರೆ ಪೂರೈಕೆ ಮಾತ್ರ ಯಥೇಚ್ಚವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ತೈಲ ದರ ಈಗಾಗಲೇ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಕೊರೊನಾ ಪ‍ರಿಣಾಮ ಕಡಿಮೆಯಾಗಿ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗದೇ ಇದ್ದರೆ ತೈಲ ದರದಲ್ಲಿ ಇನ್ನಷ್ಟು ಕುಸಿತ ಕಾಣಲಿದೆ. ಒಂದು ಬ್ಯಾರಲ್‌ ದರ 10 ಡಾಲರ್‌ಗಳಿಗೆ ಇಳಿಕೆ ಕಂಡರೂ ಅಚ್ಚರಿ ಪಡಬೇಕಾಗಿಲ್ಲ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.