ADVERTISEMENT

ಎಸ್‌ಬಿಐ: ಬಡ್ಡಿ ಹೊರೆ ಇಳಿಕೆ, ಗೃಹ, ವಾಹನ ಸಾಲ ಅಗ್ಗ

ತಿಂಗಳ ಅವಧಿಯಲ್ಲಿನ ಎರಡನೇ ಕಡಿತ

ಪಿಟಿಐ
Published 11 ಮಾರ್ಚ್ 2020, 22:07 IST
Last Updated 11 ಮಾರ್ಚ್ 2020, 22:07 IST
   
""

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಸ್ಥಿರ ಠೇವಣಿ (ಎಫ್‌ಡಿ) ಮತ್ತು ಸಾಲದ ಬಡ್ಡಿ ದರಗಳನ್ನು ಇಳಿಸಿದೆ.

ಠೇವಣಿಗಳ ಮೇಲಿನ ಬಡ್ಡಿ ದರಗಳು ಶೇ 0.10 ರಿಂದ ಶೇ 0.50 ಮತ್ತು ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ವಿವಿಧ ಅವಧಿಯ ಸಾಲದ ಬಡ್ಡಿ ದರಗಳನ್ನು ಶೇ 0.10 ರಿಂದ ಶೇ 0.15ರವರೆಗೆ ಕಡಿಮೆ ಮಾಡಿದೆ. ಹೊಸ ದರಗಳು ಮಂಗಳವಾರದಿಂದ (ಮಾ. 10) ಜಾರಿಗೆ ಬಂದಿವೆ. ಒಂದು ತಿಂಗಳಲ್ಲಿ ಎರಡನೇ ಬಡ್ಡಿ ದರ ಕಡಿತ ಇದಾಗಿದೆ.

ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಿಂದ ‘ಎಂಸಿಎಲ್‌ಆರ್‌’ ಆಧರಿಸಿದ 30 ವರ್ಷ ಅವಧಿಯ ಗೃಹ ಸಾಲಗಳ ತಿಂಗಳ ಸಮಾನ ಕಂತು (ಇಎಂಐ) ಪ್ರತಿ 1 ಲಕ್ಷಕ್ಕೆ ₹ 7ರಂತೆ ಮತ್ತು 7 ವರ್ಷಗಳ ವಾಹನ ಖರೀದಿ ಸಾಲದ ಕಂತು ಪ್ರತಿ ₹ 1 ಲಕ್ಷಕ್ಕೆ ₹ 5ರಂತೆ ಕಡಿಮೆಯಾಗಲಿದೆ.

ADVERTISEMENT

‘ಎಫ್‌ಡಿ’ ದರ ಇಳಿಕೆ: ₹ 2 ಕೋಟಿಗಿಂತ ಕಡಿಮೆ ಮೊತ್ತದ ರಿಟೇಲ್‌ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವು ಶೇ 0.10 ರಿಂದ ಶೇ 0.50ರಷ್ಟು ಕಡಿಮೆಯಾಗಿದೆ. ₹2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ 180 ದಿನಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.15ರಷ್ಟು ಇಳಿಸಲಾಗಿದೆ. ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳು ಈಗ ಶೇ 4.75ರ ಬದಲಿಗೆ ಶೇ 4.60ರಷ್ಟು ಬಡ್ಡಿ ಗಳಿಸಲಿವೆ.

ಫೆಬ್ರುವರಿಯಲ್ಲಿಯೂ ಬ್ಯಾಂಕ್‌ ಇದೇ ಬಗೆಯಲ್ಲಿ ರಿಟೇಲ್‌ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.10 ರಿಂದ ಶೇ 0.50ರಷ್ಟು ಮತ್ತು ₹2 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಬಡ್ಡಿ ದರವನ್ನು ಶೇ 0.25ರಿಂದ ಶೇ 0.50ರಷ್ಟು ತಗ್ಗಿಸಿತ್ತು.

ಎಂಸಿಎಲ್‌ಆರ್‌ ಕಡಿತ: ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಒಂದು ವರ್ಷದ ಅವಧಿಯ ಸಾಲಗಳ ಮೇಲಿನ ಬಡ್ಡಿ ದರವನ್ನು (ಎಂಸಿಎಲ್‌ಆರ್‌) ಶೇ 0.10ರಿಂದ ಶೇ 0.15ರವರೆಗೆ ಕಡಿಮೆ ಮಾಡಿದೆ. ಶೇ 7.85ರಷ್ಟಿದ್ದ ಈ ಬಡ್ಡಿ ದರ ಈಗ ಶೇ 7.75ಕ್ಕೆ ಇಳಿಯಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 10ನೇ ಬಾರಿಗೆ ಎಂಸಿಎಲ್‌ಆರ್‌ ಕಡಿತಗೊಳಿಸಲಾಗಿದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ: ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ತನ್ನ ಎಂಸಿಎಲ್ಆರ್‌ ಅನ್ನು ಶೇ 0.10ರಷ್ಟು (ಶೇ 8.10 ರಿಂದ ಶೇ 8ಕ್ಕೆ) ಕಡಿಮೆ ಮಾಡಿದೆ. ಹೊಸ ದರಗಳು ಬುಧವಾರದಿಂದ ಜಾರಿಗೆ ಬಂದಿವೆ.

‘ಎಸ್‌ಬಿ’ ಕನಿಷ್ಠ ಮೊತ್ತ ಮಿತಿ ರದ್ದು
ನವದೆಹಲಿ (ಪಿಟಿಐ):
ಉಳಿತಾಯ ಖಾತೆಯಲ್ಲಿ (ಎಸ್‌ಬಿ) ಗ್ರಾಹಕರು ಪ್ರತಿ ತಿಂಗಳೂ ನಿರ್ವಹಿಸಬೇಕಾಗಿದ್ದ ಸರಾಸರಿ ಕನಿಷ್ಠ ಮೊತ್ತವನ್ನು (ಎಎಂಬಿ) ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಕೈಬಿಟ್ಟಿದೆ.

‘ಎಸ್‌ಬಿ’ ಖಾತೆಯಲ್ಲಿ ಗ್ರಾಹಕರು ಪ್ರತಿ ತಿಂಗಳೂ ಕಾಯ್ದುಕೊಳ್ಳಬೇಕಾಗಿದ್ದ ‘ಮಿನಿಮಮ್‌ ಬ್ಯಾಲನ್ಸ್‌’ ನಿಬಂಧನೆ ಸಡಿಲಿಸಲಾಗಿದೆ. ಇನ್ನು ಮುಂದೆ ಗ್ರಾಹಕರು ತಮ್ಮ ಖಾತೆಗಳಲ್ಲಿ ‘ಝೀರೊ ಬ್ಯಾಲನ್ಸ್‌’ ಸೌಲಭ್ಯ ಪಡೆಯಬಹುದಾಗಿದೆ. ಇದರಿಂದ ಬ್ಯಾಂಕ್‌ನ 44.51 ಕೋಟಿ ಗ್ರಾಹಕರು ಪ್ರಯೋಜನ ಪಡೆಯಲಿದ್ದಾರೆ.

ತಿಂಗಳ ಎಲ್ಲ ದಿನದ ಕೊನೆಗೆ ಖಾತೆಯಲ್ಲಿರುವ ಮೊತ್ತವನ್ನು ಆ ತಿಂಗಳಲ್ಲಿರುವ ದಿನಗಳ ಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತವೇ ತಿಂಗಳ ಸರಾಸರಿ ಬ್ಯಾಲನ್ಸ್‌.

ಸದ್ಯಕ್ಕೆ ಎಸ್‌ಬಿಐ ಗ್ರಾಹಕರು ಮೆಟ್ರೊ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ ₹ 3,000, ₹ 2,000 ಮತ್ತು ₹ 1,000ರಂತೆ ‘ಎಎಂಬಿ’ ಕಾಯ್ದುಕೊಳ್ಳಬೇಕಾಗಿತ್ತು. ಖಾತೆಯಲ್ಲಿ ಈ ಮೊತ್ತದ ‘ಎಎಂಬಿ’ ಇರದಿದ್ದರೆ ₹ 5 ರಿಂದ ₹ 15ರಂತೆ ದಂಡ ಮತ್ತು ತೆರಿಗೆ ವಿಧಿಸುತ್ತಿತ್ತು.

ಎಸ್‌ಬಿ ಬಡ್ಡಿ ದರ ಇಳಿಕೆ: ಬ್ಯಾಂಕ್‌, ತನ್ನೆಲ್ಲ ಉಳಿತಾಯ ಖಾತೆಯ (ಎಸ್‌ಬಿ) ಬಡ್ಡಿ ದರಗಳನ್ನೂ ಶೇ 3ಕ್ಕೆ ಇಳಿಸಿದೆ.

‘ಗ್ರಾಹಕರಿಗೆ ಮೊದಲ ಆದ್ಯತೆ’ ಧೋರಣೆಯಡಿ,ಎಸ್‌ಎಂಎಸ್‌ಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನೂ ಬ್ಯಾಂಕ್‌ ಕೈಬಿಟ್ಟಿದೆ.‘ಎಸ್‌ಬಿ’ ಖಾತೆಯಲ್ಲಿನ ಎಲ್ಲ ಬಗೆಯ ಮೊತ್ತಕ್ಕೆ ಏಕರೂಪದ ಬಡ್ಡಿ ದರ (ಶೇ 3) ನಿಗದಿಪಡಿಸಲಾಗಿದೆ. ಇದುವರೆಗೆ ಈ ಖಾತೆಯಲ್ಲಿನ ₹ 1 ಲಕ್ಷವರೆಗಿನ ಮೊತ್ತಕ್ಕೆ ಶೇ 3.25 ಮತ್ತು ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 3ರಷ್ಟು ಬಡ್ಡಿ ದರ ಜಾರಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.