ADVERTISEMENT

ಸಿಸಿಐ ಮನವಿ ತೀರ್ಮಾನಿಸಲು ಹೈಕೋರ್ಟ್‌ಗೆ ‘ಸುಪ್ರೀಂ’ ಸೂಚನೆ

ಪಿಟಿಐ
Published 26 ಅಕ್ಟೋಬರ್ 2020, 11:47 IST
Last Updated 26 ಅಕ್ಟೋಬರ್ 2020, 11:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪ್ರಮುಖ ಇ–ಕಾಮರ್ಸ್ ವ್ಯಾಪಾರ ತಾಣಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧದ ತನಿಖೆಗೆ ಸಂಬಂಧಿಸಿದ ತಡೆಯಾಜ್ಞೆ ತೆರವುಗೊಳಿಸಲು ಕೋರಿರುವ ಸಿಸಿಐ ಮನವಿ ಕುರಿತು ತೀರ್ಮಾನಿಸುವಂತೆ‌ ಸುಪ‍್ರೀಂ ಕೋರ್ಟ್ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿದೆ.

ಈ ಎರಡೂ ಇ–ಕಾಮರ್ಸ್‌ ತಾಣಗಳು ಸ್ಪರ್ಧಾತ್ಮಕ ವಿರೋಧಿ ವಹಿವಾಟು ಕ್ರಮಗಳನ್ನು ಅನುಸರಿಸುತ್ತಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಐ (ಕಾಂಪಿಟೇಷನ್‌ ಕಮಿಷನ್‌ ಆಫ್ ಇಂಡಿಯಾ) ತನಿಖೆ ಕೈಗೊಂಡಿದೆ. ಈ ಬಗ್ಗೆ ಪರಿಹಾರ ಕ್ರಮಗಳಿಗಾಗಿ ಹೈಕೋರ್ಟ್‌ಗೇ ಅರ್ಜಿ ಸಲ್ಲಿಸುವಂತೆಯೂ ಸುಪ್ರಿಂ ಕೋರ್ಟ್ ಸಿಸಿಐಗೆ ಸೂಚಿಸಿತು.

ಸಿಸಿಐ ಪರವಾಗಿ ಹಾಜರಿದ್ದ ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ ಅವರು, ಇ–ಕಾಮರ್ಸ್ ತಾಣಗಳ ವಿರುದ್ಧದ ತನಿಖೆಗೆ ಆದೇಶಿಸಿರುವುದು ಆಡಳಿತಾತ್ಮಕ ಕ್ರಮ. ಇದರಿಂದ ಯಾವುದೇ ವ್ಯಕ್ತಿ, ಸಂಸ್ಥೆಗಳ ಹಕ್ಕುಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.‌

ADVERTISEMENT

ತನಿಖೆಯ ವ್ಯಾಪ್ತಿ ವಿಸ್ತೃತವಾಗಿರುವ ಕಾರಣ ಸಂಬಂಧಿತ ಅರ್ಜಿಯ ವಿಚಾರಣೆಯನ್ನು ಸದ್ಯಕ್ಕೆ ಕೈಗೊಳ್ಳಬಾರದು ಎಂದು ಕೋರಿದರು.

ಇ–ಕಾಮರ್ಸ್ ಪರ ವಾದಿಸಿದ ಹಿರಿಯ ವಕೀಲ ಎ.ಎಂ.ಸಿಂಘ್ವಿ, ‘200 ದಿನಗಳ ಬಳಿಕ ಸಿಸಿಐ ಕೋರ್ಟ್ ಮೆಟ್ಟಿಲೇರಿದೆ’ ಎಂದು ಹೇಳಿದರು.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ಸಿಸಿಐ ತನಿಖೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಫೆಬ್ರುವರಿ 14ರಂದು ಆದೇಶ ನೀಡಿತ್ತು. ತನಿಖೆ ಕುರಿತಂತೆ ಸಿಸಿಐ ಅದೇಶವನ್ನು ವಜಾ ಮಾಡಬೇಕು ಎಂದು ಕೋರಿ ಫ್ಲಿಪ್‌ಕಾರ್ಟ್‌ ಕೋರ್ಟ್‌ಗೆ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.