ADVERTISEMENT

ಹೂಡಿಕೆದಾರರಿಗೆ ಹಣಮರಳಿಸಿ: ‘ಸೆಬಿ‘ ಸೂಚನೆ

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌

ಪಿಟಿಐ
Published 8 ಮೇ 2020, 20:00 IST
Last Updated 8 ಮೇ 2020, 20:00 IST
   

ನವದೆಹಲಿ: ರದ್ದುಪಡಿಸಿರುವ 6 ಸಾಲ ನಿಧಿಗಳಲ್ಲಿನ ಹೂಡಿಕೆದಾರರಿಗೆ ಆದ್ಯತೆ ಮೇರೆಗೆ ಹಣ ಮರಳಿಸಲು ಗಮನ ಹರಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ಗೆ (ಎಫ್‌ಟಿಎಂಎಫ್‌) ಸೂಚಿಸಿದೆ.

ಹೂಡಿಕೆ ಮಾಡಿದ ಹಣ ಹಿಂದೆ ಪಡೆಯುವ ಒತ್ತಡ ಹೆಚ್ಚಿದ್ದರಿಂದ ಫ್ರ್ಯಾಂಕ್ಲಿನ್‌ ತನ್ನ 6 ಸಾಲ ನಿಧಿಗಳನ್ನು ಹಠಾತ್ತಾಗಿ ರದ್ದುಪಡಿಸಿತ್ತು. ಈ ಯೋಜನೆಗಳಡಿ ಹೂಡಿಕೆದಾರರ ₹ 25 ಸಾವಿರ ಕೋಟಿ ಸಿಲುಕಿಕೊಂಡಿದೆ.

ಷೇರುಪೇಟೆಯಲ್ಲಿ ವಹಿವಾಟು ನಡೆಸದ ಸಾಲ ನಿಧಿಗಳಲ್ಲಿನ ಹೂಡಿಕೆ ನಿಯಮಗಳನ್ನು ‘ಸೆಬಿ’ ಕಠಿಣಗೊಳಿಸಿದ್ದರಿಂದಲೇ ತನ್ನ ಸಾಲ ನಿಧಿಗಳ ಮೇಲೆ ಒತ್ತಡ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಆ ಯೋಜನೆಗಳನ್ನು ರದ್ದುಪಡಿಸಬೇಕಾಯಿತು ಎಂದು ‘ಎಫ್‌ಟಿ’ ಕಾರಣ ನೀಡಿದೆ.

ADVERTISEMENT

ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು ನಿಯಮಗಳಿಗೆ ತಿದ್ದುಪಡಿ ತಂದ ನಂತರವೂ ಕೆಲ ಮ್ಯೂಚುವಲ್‌ ಫಂಡ್‌ ಯೋಜನೆಗಳು 2018ರ ಸೆಪ್ಟೆಂಬರ್‌ನಿಂದೀಚೆಗೆ ಗರಿಷ್ಠ ನಷ್ಟ ಸಾಧ್ಯತೆಯ ಮತ್ತು ಪಾರದರ್ಶಕವಲ್ಲದ ಸಾಲ ಪತ್ರಗಳಲ್ಲಿ ಹಣ ತೊಡಗಿಸಿವೆ. ಅದರಿಂದಾಗಿಯೇ ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯಲ್ಲಿ ಸವಾಲುಗಳು ಉದ್ಭವಿಸಿವೆ. ಈ ಕಾರಣಕ್ಕೆ ಮ್ಯೂಚುವಲ್‌ ಫಂಡ್‌ಗಳನ್ನು ನಿಯಂತ್ರಿಸುವ ಮತ್ತು ಹೂಡಿಕೆದಾರರ ಹಿತಾಸಕ್ತಿ ರಕ್ಷಿಸುವ ಅಗತ್ಯವು ಈಗ ಇನ್ನಷ್ಟು ಹೆಚ್ಚಾಗಿದೆ ಎಂದು ‘ಸೆಬಿ’ ತಿಳಿಸಿದೆ.

’ಸೆಬಿ’ನ ಮ್ಯೂಚುವಲ್‌ ಫಂಡ್ ಸಲಹಾ ಸಮಿತಿಯ ಶಿಫಾರಸಿಗೆ ಅನುಗುಣವಾಗಿಯೇ ನಿಯಂತ್ರಣ ಕ್ರಮಗಳಲ್ಲಿ ಬದಲಾವಣೆ ತರಲಾಗಿತ್ತು. ಆ ಸಂದರ್ಭದಲ್ಲಿ ಸಲಹಾ ಸಮಿತಿಯಲ್ಲಿ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಎಎಂಸಿ ಇಂಡಿಯಾದ ಅಧ್ಯಕ್ಷ ಸಂಜಯ್‌ ಸಪ್ರೆ ಅವರೂ ಇದ್ದರು ಎಂದು ಮೂಲಗಳು ತಿಳಿಸಿವೆ.

‘ಎಫ್‌ಟಿ’ ಅಧ್ಯಕ್ಷರ ಸ್ಪಷ್ಟನೆ
6 ಸಾಲ ನಿಧಿಗಳನ್ನು ರದ್ದುಪಡಿಸಿರುವುದರಿಂದ ಹೂಡಿಕೆದಾರರು ತಮ್ಮೆಲ್ಲ ಹಣ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ. ಹೂಡಿಕೆದಾರರಿಗೆ ಹಣ ಮರಳಿಸಲಾಗುವುದು ಎಂದು ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಅಸೆಟ್ ಮ್ಯಾನೇಜ್‌ಮೆಂಟ್‌ (ಇಂಡಿಯಾ) ಅಧ್ಯಕ್ಷ ಸಂಜಯ್‌ ಸಪ್ರೆ ಸ್ಪಷ್ಟನೆ ನೀಡಿದ್ದಾರೆ.

‘ಕೋವಿಡ್‌–19’ ಪಿಡುಗು ಮತ್ತು ಆರ್ಥಿಕ ದಿಗ್ಬಂಧನದ ಕಾರಣಕ್ಕೆ ಷೇರುಪೇಟೆಯಲ್ಲಿ ಮಾರಾಟ ಒತ್ತಡ ಸೃಷ್ಟಿಯಾಗಿದೆ. ಇದರಿಂದ ನಗದು ಕೊರತೆ ಎದುರಾಗಿದೆ. ಹೂಡಿಕೆದಾರರಿಗೆ ಸಾಧ್ಯವಾದಷ್ಟು ಬೇಗ ಹಣ ಮರಳಿಸಲಾಗುವುದು. ನಮ್ಮ ಷೇರು ವಹಿವಾಟಿನ ಯೋಜನೆಗಳು (ಈಕ್ವಿಟಿ ಸ್ಕೀಮ್ಸ್‌) ಹಣಕಾಸು ಮುಗ್ಗಟ್ಟಿನಿಂದ ಬಾಧಿತವಾಗಿಲ್ಲ‘ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.