ADVERTISEMENT

ಷೇರುಪೇಟೆ, ಅರ್ಥವ್ಯವಸ್ಥೆ ನಡುವೆ ಕೊಂಡಿ ಕಳಚಿದೆ: ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ

ಇದು ಜಾಗತಿಕ ವಿದ್ಯಮಾನ ಎಂದ ತ್ಯಾಗಿ

ಪಿಟಿಐ
Published 25 ಫೆಬ್ರುವರಿ 2021, 13:14 IST
Last Updated 25 ಫೆಬ್ರುವರಿ 2021, 13:14 IST
ಅಜಯ್ ತ್ಯಾಗಿ
ಅಜಯ್ ತ್ಯಾಗಿ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಹಣಕಾಸು ಸ್ಥಿರತೆ ಮಂಡಳಿ (ಎಫ್‌ಎಸ್‌ಬಿ) ‘ಹಣಕಾಸು ಮಾರುಕಟ್ಟೆಗಳು ಹಾಗೂ ನೈಜ ಅರ್ಥವ್ಯವಸ್ಥೆಯ ನಡುವೆ ಸಂಬಂಧವೇ ಇಲ್ಲದಂತಾಗಿದೆ’ ಎಂದು ವ್ಯಕ್ತಪಡಿಸಿದ್ದ ಕಳವಳಕ್ಕೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ಅವರು ದನಿಗೂಡಿಸಿದ್ದಾರೆ.

ಕೋವಿಡ್–19 ಸಾಂಕ್ರಾಮಿಕ ಹರಡಲು ಆರಂಭಿಸಿದ ನಂತರ ಷೇರು ಮಾರುಕಟ್ಟೆಗಳು ಒಮ್ಮೆಗೇ ತೀವ್ರ ಕುಸಿತ ಕಂಡಿದ್ದು, ನಂತರ ಅತ್ಯಂತ ವೇಗವಾಗಿ ಚೇತರಿಕೆ ಕಂಡಿದ್ದು ಕಳೆದ ಮೂವತ್ತು ವರ್ಷಗಳಲ್ಲಿ ಕಾಣದಂಥದ್ದು ಎಂದು ತ್ಯಾಗಿ ಹೇಳಿದ್ದಾರೆ.

‘ಸಾಮಾನ್ಯವಾಗಿ, ಷೇರು ಮಾರುಕಟ್ಟೆಗಳು ಅರ್ಥ ವ್ಯವಸ್ಥೆಯ ಆರೋಗ್ಯದ ಸೂಚಕಗಳೂ ಹೌದು. ಅರ್ಥ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತದೆಯೋ ಷೇರು ಮಾರುಕಟ್ಟೆ ಸೂಚ್ಯಂಕಗಳು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತವೆ. ಆದರೆ, ಸಾಂಕ್ರಾಮಿಕ ಎದುರಾದ ನಂತರದಲ್ಲಿ, ಹಣಕಾಸು ಮಾರುಕಟ್ಟೆಗಳು ಮತ್ತು ನೈಜ ಅರ್ಥ ವ್ಯವಸ್ಥೆಯ ನಡುವಿನ ಕಂದಕ ಹೆಚ್ಚುತ್ತಿರುವ ಬಗ್ಗೆ ಎಫ್‌ಎಸ್‌ಬಿ ಹಾಗೂ ಆರ್‌ಬಿಐ ಸೇರಿದಂತೆ ಹಲವು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ’ ಎಂದು ತ್ಯಾಗಿ ಹೇಳಿದರು.

ADVERTISEMENT

‘ಹಿಂದೆಂದೂ ಕಾಣದಂತಹ ಈ ಬಗೆಯ ಪರಿಸ್ಥಿತಿ ಭಾರತದಲ್ಲಿ ಮಾತ್ರ ಸೃಷ್ಟಿಯಾಗಿಲ್ಲ. ಜಾಗತಿಕ ಮಟ್ಟದಲ್ಲಿ ಹಲವು ಮಾರುಕಟ್ಟೆಗಳಲ್ಲಿ ಇಂತಹ ಸ್ಥಿತಿ ಕಂಡುಬಂದಿದೆ’ ಎಂದು ಅವರು ಹೇಳಿದರು.

ಕೋವಿಡ್–19 ಹರಡಿದ ನಂತರದಲ್ಲಿ ಹಲವು ದೇಶಗಳು ಆರ್ಥಿಕತೆಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಂಡವು. ಇದು ಅರ್ಥ ವ್ಯವಸ್ಥೆಯಲ್ಲಿ ನಗದು ಚಲಾವಣೆ ಹೆಚ್ಚುವಂತೆ ಮಾಡಿತು. ಇದರಿಂದಾಗಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರುಮುಖವಾಗಿವೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.