ADVERTISEMENT

ತೈಲ ದುಬಾರಿ: ಸೂಚ್ಯಂಕ ಕುಸಿತ

ಟ್ರಂಪ್‌ ನಿರ್ಧಾರದ ಪರಿಣಾಮ; ಹೂಡಿಕೆದಾರರಿಗೆ ₹ 1.92 ಲಕ್ಷ ಕೋಟಿ ನಷ್ಟ

ಪಿಟಿಐ
Published 22 ಏಪ್ರಿಲ್ 2019, 20:00 IST
Last Updated 22 ಏಪ್ರಿಲ್ 2019, 20:00 IST
   

ಮುಂಬೈ: ಕಚ್ಚಾ ತೈಲ ದರ ಏರಿಕೆಯು ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ನೀಡಿದ್ದ ವಿನಾಯ್ತಿಯನ್ನು ಮೇ 2ರಿಂದ ಹಿಂದೆ ಪಡೆಯಲು ಅಮೆರಿಕ ನಿರ್ಧರಿಸಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ. ಇದು ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಸಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 495 ಅಂಶ ಕುಸಿತ ಕಂಡು, 38,645 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 158 ಅಂಶ ಇಳಿಕೆಯಾಗಿ 11,594 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಹೂಡಿಕೆದಾರರಿಗೆ ನಷ್ಟ:ಷೇರುಪೇಟೆಯಲ್ಲಿ ಸೂಚ್ಯಂಕ ಕುಸಿತ ಕಂಡಿರುವುದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯ ₹ 1.92 ಲಕ್ಷ ಕೋಟಿಗಳಷ್ಟು ಕರಗಿದೆ.ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 151.60 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ 2.76ರಷ್ಟು ಇಳಿಕೆ ಕಂಡಿದೆ. ಯೆಸ್‌ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ಗಳು ಹೆಚ್ಚಿನ ನಷ್ಟ ಕಂಡಿವೆ.

ಆರ್ಥಿಕ ಸಂಕಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ಸಂಸ್ಥೆಯ ಷೇರುಗಳು ಮೂರು ದಿನಗಳಲ್ಲಿ ಶೇ 40.94ರಷ್ಟು ಇಳಿಕೆ ಕಂಡಿವೆ.

ರೂಪಾಯಿ ಮೌಲ್ಯ 32 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ 69.67ರಂತೆ ವಿನಿಮಯಗೊಂಡಿತು.

ತೈಲ ದರ 6 ತಿಂಗಳ ಗರಿಷ್ಠ
ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತವೂ ಸೇರಿದಂತೆ 8 ದೇಶಗಳಿಗೆ ನೀಡಿದ್ದ ವಿನಾಯ್ತಿಯನ್ನು ಮೇ 2ರಿಂದ ಹಿಂದಕ್ಕೆ ಪಡೆಯಲು ಅಮೆರಿಕ ನಿರ್ಧರಿಸಿದೆ. ಇದರಿಂದ ತೈಲ ದರ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಬ್ರೆಂಟ್‌ ತೈಲ ದರ ಶೇ 2.56ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 73.81 ಡಾಲರ್‌ಗಳಿಗೆ ತಲುಪಿದೆ.

ಭಾರತವು ಗರಿಷ್ಠ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ತೈಲ ದರದಲ್ಲಿ ಏರಿಕೆಯಾದರೆ ದೇಶದ ವಿತ್ತೀಯ ಕೊರತೆ ಮತ್ತು ರೂಪಾಯಿ ಮೇಲೆಒತ್ತಡ ಹೆಚ್ಚಾಗಲಿದೆ.

ಭಾರತ, ಚೀನಾ, ಟರ್ಕಿ, ಗ್ರೀಸ್‌, ಇಟಲಿ, ಜಪಾನ್‌, ದಕ್ಷಿಣ ಕೊರಿಯಾ ಮತ್ತು ತೈವಾನ್‌ ದೇಶಗಳು ಮೇ 2ರಿಂದ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವಂತಿಲ್ಲ.

ಇರಾಕ್‌ ಮತ್ತು ಸೌದಿ ಅರೇಬಿಯಾದ ನಂತರ ಇರಾನ್‌, ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುತ್ತಿದೆ. 2017ರ ಏಪ್ರಿಲ್‌ನಿಂದ 2018ರ ಜನವರಿಯವರೆಗೆ 1.84 ಕೋಟಿ ಟನ್‌ಗಳಷ್ಟು ಕಚ್ಚಾ ತೈಲವನ್ನು ಭಾರತಕ್ಕೆ ರಫ್ತು ಮಾಡಿದೆ.

*
ತೈಲ ಆಮದು ವಿನಾಯ್ತಿ ಮಿತಿ ಮುಂದುವರಿಸದೇ ಇರಲು ಟ್ರಂಪ್‌ ನಿರ್ಧರಿಸಿದ್ದಾರೆ. ಇರಾನ್‌ನಿಂದ ತೈಲ ರಫ್ತು ಸಂಪೂರ್ಣ ನಿಲ್ಲಿಸುವುದು ಇದರ ಉದ್ದೇಶ.
-ಸಾರಾ ಸ್ಯಾಂಡರ್ಸ್‌, ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ

*
ಪೂರೈಕೆಯಲ್ಲಿ ವ್ಯತ್ಯಯವಾಗದಂತೆತೈಲ ಉತ್ಪಾದಿಸುವ ಇತರೆ ರಾಷ್ಟ್ರಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು
-ಖಾಲಿದ್ ಅಲ್‌ ಫಲಿಹ್, ಸೌದಿ ಅರೇಬಿಯಾದ ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.