ADVERTISEMENT

ಹಣದುಬ್ಬರ ಹೆಚ್ಚಳದ ಭೀತಿ: ಕುಸಿದ ಷೇರುಪೇಟೆ

ಪಿಟಿಐ
Published 10 ಜೂನ್ 2022, 13:36 IST
Last Updated 10 ಜೂನ್ 2022, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾದ ಪರಿಣಾಮವಾಗಿ, ಹಣದುಬ್ಬರ ಇನ್ನಷ್ಟು ಜಾಸ್ತಿ ಆಗುವ ಭೀತಿ ಎದುರಾಗಿದೆ. ಇದರಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಗಳತ್ತ ಮುಖ ಮಾಡಿದರು. ಇದು ದೇಶದ ಷೇರುಪೇಟೆಗಳು ಶುಕ್ರವಾರ ಕುಸಿಯಲು ಕಾರಣವಾಯಿತು.

ಅಲ್ಲದೆ, ವಿದೇಶಿ ಬಂಡವಾಳ ಹೂಡಿಕೆದಾರರು ಬಂಡವಾಳ ಹಿಂತೆಗೆತ ಮುಂದುವರಿಸಿರುವುದು ಹಾಗೂ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಇನ್ನಷ್ಟು ಕುಸಿದಿರುವುದು ಕೂಡ ಸೂಚ್ಯಂಕಗಳ ಇಳಿಕೆಗೆ ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,016 ಅಂಶ ಕುಸಿಯಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 276 ಅಂಶ ಇಳಿಕೆ ಕಂಡಿತು. ಶುಕ್ರವಾರದ ವಹಿವಾಟಿನಲ್ಲಿ ಹೂಡಿಕೆದಾರರು ಒಟ್ಟು ₹ 3.11 ಲಕ್ಷ ಕೋಟಿ ಕಳೆದುಕೊಂಡರು. ಬಿಎಸ್‌ಇಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಬಂಡವಾಳ ಮೌಲ್ಯವು ₹ 2.51 ಲಕ್ಷಕ್ಕೆ ಇಳಿದಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.45ರಷ್ಟು ಜಾಸ್ತಿಯಾಗಿ ಪ್ರತಿ ಬ್ಯಾರೆಲ್‌ಗೆ 123.62 ಡಾಲರ್‌ಗೆ ತಲುಪಿದೆ.

ಇಡೀ ವಾರದ ಅವಧಿಯಲ್ಲಿ ಸೆನ್ಸೆಕ್ಸ್ 1,465 ಅಂಶ, ನಿಫ್ಟಿ 382 ಅಂಶ ಇಳಿಕೆ ದಾಖಲಿಸಿವೆ. ‘ಹೂಡಿಕೆದಾರರು ಅಮೆರಿಕದ ಫೆಡರಲ್‌ ರಿಸರ್ವ್‌ ಕೈಗೊಳ್ಳುವ ತೀರ್ಮಾನದ ಕಡೆ ಗಮನ ಇರಿಸಿದ್ದಾರೆ. ಅದು ಬಡ್ಡಿ ದರವನ್ನು ಶೇ 0.50ರಷ್ಟು ಜಾಸ್ತಿ ಮಾಡುವ ನಿರೀಕ್ಷೆ ಇದೆ’ ಎಂದು ಎಮ್‌ಕೆ ವೆಲ್ತ್‌ ಮ್ಯಾನೇಜ್‌ಮೆಂಟ್ ಕಂಪನಿಯ ಸಂಶೋಧನಾ ಮುಖ್ಯಸ್ಥ ಜೋಸೆಫ್ ಥಾಮಸ್ ಹೇಳಿದ್ದಾರೆ.

ಆರ್‌ಬಿಐ ರೆಪೊ ದರ ಜಾಸ್ತಿ ಮಾಡಿರುವುದು ಹಾಗೂ ವಿದೇಶಿ ಹೂಡಿಕೆದಾರರು ಹಣ ಹಿಂದಕ್ಕೆ ಪಡೆಯುತ್ತಿರುವುದು ಮುಂದಿನ ವಾರಗಳಲ್ಲಿ ಷೇರು ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ‍ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.